ಉಪ್ಪಳ: ಕ್ರೈಸ್ತ ಬಾಂಧವರು ಪವಿತ್ರ ವಾರ ಎಂದು ಕರೆಯಲ್ಪಡುವ ಪವಿತ್ರ ಸಪ್ತಾಹ ಗರಿಗಳ ಭಾನುವಾರ ಆಚರಣೆ ಭಾನುವಾರ ಆರಂಭಗೊಂಡಿತು.
ಕಯ್ಯಾರು ಕ್ರಿಸ್ತ ರಾಜ ದೇವಾಲಯದಲ್ಲಿ ನಡೆದ ಆಶೀರ್ವಚನ ಮತ್ತು ದಿವ್ಯ ಬಲಿಪೂಜೆಗೆ ಫಾದರ್ ವಿಕ್ಟರ್ ಡಿ'ಸೋಜ ನೇತೃತ್ವ ನೀಡಿದರು.
ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಯೇಸು ಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದಾಗ ಭಕ್ತರು ಒಲಿವ್ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಬಲಿಪೂಜೆಯಲ್ಲಿ ಪಾಲ್ಗೊಂಡರು.
ಪವಿತ್ರ ಸಪ್ತಾಹವು ಕ್ರೈಸ್ತರಿಗೆ ಅತಿ ಮಹತ್ವದ್ದಾಗಿದ್ದು, ಗುರುವಾರ ಯೇಸು ಕ್ರಿಸ್ತರ ಕೊನೆಯ ಭೋಜನದ ಸ್ಮರಣೆ ಮಾಡಿದರೆ, ಶುಕ್ರವಾರ ಯೇಸುಕ್ರಿಸ್ತರ ಮರಣದ ದಿನವಾದ `ಗುಡ್ ಫ್ರೈಡೆ' ಆಚರಣೆ ಮಾಡಿ ಕ್ರೈಸ್ತರು ಇಡೀ ದಿನವನ್ನು ಉಪವಾಸ ಧ್ಯಾನದಲ್ಲಿ ಕಳೆಯುತ್ತಾರೆ. ಶನಿವಾರ ಈಸ್ಟರ್ ಜಾಗರಣೆ ಮತ್ತು ಭಾನುವಾರ ಯೇಸು ಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ಈಸ್ಟರ್ ಹಬ್ಬದ ಆಚರಣೆ ನಡೆಯುತ್ತದೆ.