ಮುಳ್ಳೇರಿಯ: ಬೆಳ್ಳೂರು ಪಂಚಾಯಿತಿ ದೊಂಪತ್ತಡ್ಕದ ಕಗ್ಗಲ್ಲು ಕ್ವಾರೆ ಪರವಾನಗಿ ರದ್ದುಗೊಳಿಸುವ ಪಂಚಾಯಿತಿ ನಿರ್ಣಯದ ಬೆನ್ನಲ್ಲೇ ರಾತ್ರಿ ಹಗಲೆನ್ನದೆ ಜೆಸಿಬಿ ಉಪಯೋಗಿಸಿ ಗುಡ್ಡೆಯನ್ನು ಸಮತಟ್ಟು ಗೊಳಿಸುವ ಮೂಲಕ ಎತ್ತರ ತಗ್ಗಿಸಿ ಕಾನೂನಿನ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ನಡೆಯುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.
ಸ್ಥಳೀಯರ ಪ್ರತಿಭಟನೆ, ದೂರಿನ ಹಿನ್ನೆಲೆಯಲ್ಲಿ ಏ.11ರಂದು ಬೆಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಆಡಳಿತ ಸಮಿತಿ ತುರ್ತು ಸಭೆಯಲ್ಲಿ ಕ್ವಾರೆ ಪರವಾನಗಿ ನವೀಕರಿಸದಿರಲು ಹಾಗೂ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಮಾ.31ಕ್ಕೆ ಕ್ವಾರೆ ಪರವಾನಗಿ ಮುಗಿದಿದ್ದು ಗ್ರಾಮ ಪಂಚಾಯಿತಿ ನವೀಕರಿಸಿ ನೀಡದಿರುವ ಬೆನ್ನಲ್ಲೇ ಕಗ್ಗಲ್ಲು ಖನನ ನಿಲ್ಲಿಸಲಾಗಿದ್ದರೂ ಕಳೆದೊಂದು ವಾರದಿಂದ ರಾತ್ರಿ ಹಗಲೆನ್ನದೆ ಕ್ವಾರೆಯ ಮೇಲ್ಬಾಗ ಹಾಗೂ ಎರಡೂ ಬದಿಗಳಿಂದ ಕಾನೂನು ಬಾಹಿರವಾಗಿ ಜೆಸಿಬಿ ಬಳಸಿ ಭಾರೀ ಪ್ರಮಾಣದ ಮಣ್ಣು ಅಗೆದು ಸಮತಟ್ಟು ಗೊಳಿಸುತ್ತಾ ಬರಲಾಗಿದ್ದು ಭಾರೀ ಮಳೆ ಉಂಟಾದಲ್ಲಿ ಅಗೆಯಲಾದ ಮಣ್ಣು ನೀರಲ್ಲಿ ಕೊಚ್ಚಿ ಹೋಗಿ ಕ್ವಾರೆಯ ಕೆಳ ಭಾಗದ ಕೃಷಿ ಭೂಮಿ, ಜಲ ಮೂಲಗಳಾದ ಹೊಳೆ ತೋಡುಗಳಲ್ಲಿ ತುಂಬಿ ಎಕ್ರೆ ಗಟ್ಟಲೆ ಕೃಷಿ ಭೂಮಿ ನಾಶವಾಗುವ ಸಾಧ್ಯತೆ ಇರುವುದಾಗಿ ಕೃಷಿಕರು ಹಾಗೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕ್ವಾರೆ ಸಮೀಪದ ಪಂಚಾಯಿತಿ ಸ್ಮಶಾನ ಭೂಮಿಯ ಒಂದು ಭಾಗವನ್ನು ಈಗಾಗಲೇ ಕೈವಶ ಇರಿಸಿ ಅಲ್ಲೂ ಅಗೆಯಲಾಗುತ್ತಿದ್ದು ಭೂಕುಸಿತದಿಂದ ಸ್ಮಶಾನ ನೆಲ ಸಮವಾಗುವ ಸಾಧ್ಯತೆ ಇದೆ.
ಈ ಬಗ್ಗೆ ಬೆಳ್ಳೂರು ಏತಡ್ಕ ದೊಂಪತ್ತಡ್ಕ ಪರಿಸರ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಗ್ರಾಮಾಧಿಕಾರಿ, ತಹಶೀಲ್ದಾರ್, ಜಿಯೋಲಜಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಚುನಾವಣೆ ಸಬೂಬಿನೊಂದಿಗೆ ದೂರು ದಾಖಲಿಸಿಕೊಳ್ಳಲು ಹಾಗೂ ಸ್ಥಳಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ಸಂಬಂಧಿಸಿದ ಅಧಿಕಾರಿಗಳು ಕ್ವಾರೆ ಪ್ರದೇಶದಲ್ಲಿ ಅಗೆದು ಹಾಕಲಾದ ಮಣ್ಣನ್ನು ಶೀಘ್ರ ತೆರವುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅಭಿಮತ:
'ದೊಂಪತ್ತಡ್ಕ ಕೋರೆ ಪರವಾನಗಿ ನವೀಕರಣ ಗೊಳ್ಳದಿದ್ದರೂ ಹಗಲು ರಾತ್ರಿಯೆನ್ನದೆ ಜೆಸಿಬಿ ಬಳಸಿ ಗುಡ್ಡ ಅಗೆಯಲಾಗುತ್ತಿರುವುದನ್ನು ಗ್ರಾಮಾಧಿಕಾರಿಗಳ ಗಮನಕ್ಕೆ ತಂದಾಗ ಮಣ್ಣಿನ ಖನನಕ್ಕೆ ಪರವಾನಿಗೆ ಇದೆ ಎಂದಿದ್ದು ಈ ಬಗ್ಗೆ ಸಂಶಯಗೊಂಡು ಜಿಯೋಲಜಿ ಇಲಾಖೆ ಅಧಿಕಾರಿಗಳನ್ನು ಸಮೀಪಿಸಿದಾಗ, ಯಾವುದೇ ರೀತಿಯ ಪರವಾನಿಗೆ ನೀಡಿಲಾಗಿಲ್ಲ ಹಾಗೂ ಪಂಚಾಯಿತಿ ಪರವಾನಗಿ ನವೀಕರಿಸದಿದ್ದಲ್ಲಿ, ಅಗೆತ ಕಾಮಗಾರಿಗಳು ನಡೆದಲ್ಲಿ ಅದು ಕಾನೂನು ಬಾಹಿರ ಎಂದಿದ್ದಾರೆ.ಈ ಬಗ್ಗೆ ಆದೂರು ಠಾಣಾ ವೃತ್ತ ನಿರೀಕ್ಷಕರ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ.
ರಶೀದ್ ಸಿ.ಎಂ.
ಸಂಚಾಲಕ, ಬೆಳ್ಳೂರು ಏತಡ್ಕ ದೊಂಪತ್ತಡ್ಕ ಪರಿಸರ ಸಂರಕ್ಷಣಾ ಸಮಿತಿ.