ಕುಂಬಳೆ: ಪ್ರಜಾಪ್ರಭುತ್ವ ನೀತಿಯಲ್ಲಿ ಪ್ರತಿ ಮತವೂ ಮಹತ್ವದ್ದು ಎಂದು ಲೋಕಸಭಾ ಕ್ಷೇತ್ರ ಚುನಾವಣೆಯ ಜಿಲ್ಲಾ ಮಟ್ಟದ ನಿರೀಕ್ಷಕ ಎಸ್.ಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ಸ್ವೀಪ್ ವತಿಯಿಂದ ಮತದಾನ ಜಾಗೃತಿ ಸಂಬಂಧ ಪರ್ಯಟನೆ ನಡೆಸುತ್ತಿರುವ "ನನ್ನ ಮತದಾನ, ನನ್ನ ಹಕ್ಕು" ಎಂಬ ಕನ್ನಡ ಬೀದಿನಾಟಕ ಉದ್ಘಾಟನೆ ಸಂಬಂಧ ಸೋಮವಾರ ಕುಂಬಳೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ದೇಶವನ್ನು ಯಾರು ಮುನ್ನಡೆಸಬೇಕು ಎಂದು ತೀರ್ಮಾನಿಸುವ ಹಕ್ಕು ಜನತೆಯನ್ನು. ಪ್ರತಿ ಪೌರನೂ ಸಂವಿಧಾನ ಪ್ರಕಾರದ ಕರ್ತವ್ಯವನ್ನು ಪಾಲಿಸಬೇಕು ಎಂದವರು ನುಡಿದರು.
ಬೀದಿನಾಟಕ ಪರ್ಯಟನೆಯನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಡಿಸಜಿತ್ ಬಾಬು ಅವರು ಮಾತನಾಡಿ ಲೋಕಸಭೆ ಚುನಾವಣೆಯಲ್ಲಿ ಯಾರ ಮತದಾನವೂ ನಡೆಯದೇ ಇರಕೂಡದು ಎಂಬ ನಿಟ್ಟಿನಲ್ಲಿ ಸಮಾಜ ಮುಂಜಾಗರೂಕತೆ ವಹಿಸಬೇಕು. ಮಂಜೇಶ್ವರ, ಕಾಸರಗೋಡು ವಿಧಾನಸಭೆ ಕ್ಷೇತ್ರಗಳಲ್ಲಿ ಉಳಿದೆಡೆಗೆ ಹೋಲಿಸಿದರೆ ಮತಚಲಾವಣೆ ಕಡಿಮೆಯಾಗಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ಎಲ್ಲ ಮತದಾತರೂ ಮತಚಲಾವಣೆ ನಡೆಸುವಂತೆ ಸಮಾಜ ಯತ್ನಿಸಬೇಕು ಎಂದು ನುಡಿದರು.