ಕಾಸರಗೋಡು: ಚುನಾವಣೆ ವೇಳೆ ವಿವಿಪಾಟ್ ಸಂಬಂಧ ನಿಜವಾದ ಸಮಸ್ಯೆಗಳಿದ್ದರೆ ಮಾತ್ರ ಚುನಾವಣೆ ಆಯೋಗಕ್ಕೆ ದೂರು ನೀಡಬೇಕು. ವಿನೋದಕ್ಕಾಗಿ, ವಿನಾ ಕಾರಣ ಸಂಶಯದ ಹಿನ್ನೆಲೆಯಲ್ಲಿ ಅಥವಾ ಇನ್ನಿತರ ಕ್ಷುಲ್ಲಕ ಕಾರಣಗಳಿಗಾಗಿ ಸುಳ್ಳು ದೂರುಗಳನ್ನು ಈ ಸಂಬಂಧ ದೂರು ಸಲ್ಲಿಸಿದಲ್ಲಿ ದೂರುದಾತ ಕಾನೂನಿನ ಬಿಗಿಯಲ್ಲಿ ಸಿಲುಕಿಕೊಳ್ಳುವ ಭೀತಿಯಿದೆ.
ಏ.23ರಂದು ನಡೆಯುವ ಲೋಕಸಭೆ ಚುನಾವಣೆ ಸುಧಾರಿತಗೊಳ್ಳುವ ನಿಟ್ಟಿನಲ್ಲಿ ಸ್ಥಾಪಿಸಲಾದ ವಿವಿಪಾಟ್ ಸಂಬಂಧ ದೂರುಗಳನ್ನು ಚುನಾವಣೆ ಆಯೋಗ ತುಂಬ ಜಾಗ್ರತೆಯಿಂದ ಪರಿಶೀಲಿಸುತ್ತಿದೆ. ಮತದಾನ ನಡೆದ ತಕ್ಷಣ ವಿವಿಪಾಟ್ ಯಂತ್ರದಲ್ಲಿ ಅಭ್ಯರ್ಥಿಯ ಹೆಸರು, ಕ್ರಮ ಸಂಖ್ಯೆ, ಚಿಹ್ನೆ ಇತ್ಯಾದಿ 7 ಸೆಕೆಂಡ್ ಕಾಲ ಯಂತ್ರದ ಸ್ಕ್ರೀನ್ ನಲ್ಲಿ ಇರುತ್ತದೆ. ತದನಂತರ ಈ ಸಂಬಂಧ ಸ್ಲಿಪ್ ಯಂತ್ರದ ಬಾಕ್ಸ್ ನಲ್ಲಿ ಬಂದು ಬೀಳುತ್ತದೆ. ಹೀಗೆ ಪ್ರತಿ ಮತದಾರನ ಸ್ಲಿಪ್ ಯಂತ್ರದ ಬಾಕ್ಸ್ ನಲ್ಲಿ ಇರುವುದು.
ವಿವಿಪಾಟ್ ನ ಪ್ರಕ್ರಿಯೆ ಬಗ್ಗೆ ಮತದಾತ ಸಂಶಯ ವ್ಯಕ್ತಪಡಿಸಿದರೆ ಪ್ರಿಸೈಡಿಂಗ್ ಅಧಿಕಾರಿ ಈ ಮತದಾತರಿಂದ ಸತ್ಯ ಪ್ರತಿಜ್ಞೆ(ಅನೆಕ್ಸ್ 24) ಲಿಖಿತರೂಪದಲ್ಲಿ ಪಡೆದು, ರೂಲ್ 49 ಎಂ.ಎ.ಪ್ರಕಾರ ಕ್ರಮಕೈಗೊಳ್ಳಲಿದ್ದಾರೆ. ಮತದಾತ ಈ ವೇಳೆ ತಪ್ಪು ಸತ್ಯ ಪ್ರತಿಜ್ಞೆ ನೀಡಿದ್ದರೆ , ಅದರಿಂದ ಉಂಟಾಗಬಹುದಾದ ನಂತರದ ಫಲವನ್ನು ಮುಂಚಿತವಾಗಿಯೇ ಅಧಿಕಾರಿ ಮತದಾತನಿಗೆ ಮನವರಿಕೆ ಮಾಡಿಕೊಡಬೇಕು. ನಂತರವೂ ಮತದಾತ ತನ್ನ ನಿಲುವಿನಲ್ಲಿ ಖಚಿತವಾಗಿರುವುದಾದರೆ ಈ ವೇಳೆ ಅಭ್ಯರ್ಥಿ/ಏಜೆಂಟರ ಸಮಕ್ಷದಲ್ಲಿ ಮತ್ತೊಮ್ಮೆ ಮತದಾನ ನಡೆಸಲು ಅವಕಾಶ ನೀಡಲಿದ್ದಾರೆ. ಈ ಸಂಬಂಧ ಮಾಹಿತಿಯನ್ನು ಫಾರಂ 17 ಎ ಯಲ್ಲಿ ದಾಖಲಿಸಲಾಗುವುದು.
ಈ ವೇಳೆ ಸಲ್ಲಿಸಿದ ಆರೋಪ ಸತ್ಯವಾಗಿದ್ದರೆ ಪ್ರಿಸೈಡಿಂಗ್ ಅಧಿಕಾರಿ ಈ ವಿಚಾರವನ್ನು ಚುನಾವಣೆ ಅಧಿಕಾರಿಗೆ ತಿಳಿಸಬೇಕು. ಚುನಾವಣೆ ಅಧಿಕಾರಿ ಈ ಕುರಿತು ಮುಂದಿನ ಹಂತಗಳನ್ನು ಪ್ರಿಸೈಡಿಂಗ್ ಅಧಿಕಾರಿಗೆ ತಿಳಿಸುವರು. ಈ ಆದೇಶಗಳನ್ನು ಪ್ರಿಸೈಡಿಂಗ್ ಅಧಿಕಾರಿ ಪಾಲಿಸಬೇಕು. ಆರೋಪ ಹುಸಿಯಾಗಿದ್ದರೆ ಮತದಾತನ ವಿರುದ್ಧ ಭಾರತೀಯ ದಂಡ ಸಂಹಿತೆ 177 ಪ್ರಕಾರ 6 ತಿಂಗಳ ವರೆಗಿನ ಸಜೆ ಅಥವಾ ಒಂದು ಸಾವಿರ ರೂ. ದಂಡ, ಇಲ್ಲವಾದರೆ ಎರಡೂ ಶಿಕ್ಷೆ ಜೊತೆಗೆ ಅನುಭವಿಸಬೇಕಾಗಬಹುದು.
ವಿವಿಪಾಟ್ ಕುರಿತು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ : ಜಿಲ್ಲಾಧಿಕಾರಿ
ವಿವಿಪಾಟ್ ಕುರಿತು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದು, ಇಂಥಾ ಮಾಹಿತಿ ಪ್ರಸಾರಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಎಚ್ಚರಿಕೆ ನೀಡಿದ್ದಾರೆ.
ಮತಯಂತ್ರದಲ್ಲಿ ಮತದಾನ ನಡೆಸಿದಾಗ, ಉದ್ದೇಶಿಸಿದ ಅಭ್ಯರ್ಥಿಯ ಮುಂದೆ ಇರುವ ದೀಪ ಉರಿಯದೇ ಇದ್ದರೆ, ಗುಂಡಿ ಒತತಿರುವ ಬೆರಳನ್ನು ಅಲ್ಲಿಂದ ತೆರವುಗೊಳಿಸದೇ ಹಾಗೇ ಇರಿಸಿ ಅಧಿಕಾರಿಗಳನ್ನು ಕರೆದು ತೋರಬೇಕು. ಪತ್ರಕರ್ತರು ಬಂದ ಮೇಲೆ ಇಲ್ಲಿ ಮತದಾನದಲ್ಲಿ ಕೃತ್ರಿಮ ನಡೆದಿದೆ ಎಂದು ತಿಳಿಸಿ ಬೆರಳು ತೆರವುಗೊಳಿಸಬೇಕು ಎಂಬ ರೀತಿಯ ಮಾಹಿತಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಕೊಮಡಿವೆ. ಇದು ಶುದ್ಧ ಸುಳ್ಳು ಮಾಹಿತಿ. ಮತಯಂತ್ರದಲ್ಲಿ ಉದ್ದೇಶಿಸಿದ ಅಭ್ಯರ್ಥಿಯ ಮುಂದಿನ ದೀಪ ಉರಿಯದೇ ಇದ್ದಲ್ಲಿ ತಕ್ಷಣ ಪ್ರಿಸೈಡಿಂಗ್ ಅಧಿಕಾರಿಗೆ ಮಾಹಿತಿ ನಿಡಬೇಕಾದುದು ಸರಿಯಾದ ಕ್ರಮ.
ಉದ್ದೇಶಿಸಿದ ಅಭ್ಯರ್ಥಿಗೆ ತನ್ನ ಮತಚಲಾವಣೆಯಾಗಿದೆ ಎಂಬ ಖಚಿತತೆಗಾಗಿಯೇ ವಿವಿಪಾಟ್ ಬಳಕೆಯಾಗುತ್ತಿದೆ. ಮತದಾನ ನಡೆದ ತಕ್ಷಣ ವಿವಿಪಾಟ್ ಯಂತ್ರದಲ್ಲಿ ಅಭ್ಯರ್ಥಿಯ ಹೆಸರು, ಕ್ರಮ ಸಂಖ್ಯೆ, ಚಿಹ್ನೆ ಇತ್ಯಾದಿ 7 ಸೆಕೆಂಡ್ ಕಾಲ ಯಂತ್ರದ ಸ್ಕ್ರೀನ್ ನಲ್ಲಿ ಇರುತ್ತದೆ. ತದನಂತರ ಈ ಸಂಬಂಧ ಸ್ಲಿಪ್ ಯಂತ್ರದ ಬಾಕ್ಸ್ ನಲ್ಲಿ ಬಂದು ಬೀಳುತ್ತದೆ. ಹೀಗೆ ಪ್ರತಿ ಮತದಾರನ ಸ್ಲಿಪ್ ಯಂತ್ರದ ಬಾಕ್ಸ್ ನಲ್ಲಿ ಇರುವುದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.