ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್‍ವೇಸ್ ವಿಮಾನಯಾನ ಸಂಸ್ಥೆಗೆ ಬ್ಯಾಂಕ್ ಗಳು 400 ಕೋಟಿ ರುಪಾಯಿ ತುರ್ತು ನೆರವು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದಲೇ ತಾತ್ಕಾಲಿಕವಾಗಿ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇದರ ಪರಿಣಾಮ 17 ಸಾವಿರ ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಜೆಟ್ ಏರ್ ವೇಸ್ ವಿಮಾನ ಸೇವೆಗಳಲ್ಲಿ ಅಡಚಣೆ ಉಂಟಾಗುವುದನ್ನು ತಪ್ಪಿಸಲು ಜೆಟ್ ಏರ್ ವೇಸ್ ಸಂಸ್ಥೆ ಎಸ್ ಬಿಐ ನೇತೃತ್ವದ 26 ಬ್ಯಾಂಕ್ ಗಳ ಒಕ್ಕೂಟಕ್ಕೆ 400 ಕೋಟಿ ರುಪಾಯಿ ತುರ್ತು ಹಣಕಾಸು ನೆರವು ನೀಡುವಂತೆ ಕೋರಿತ್ತು. ಆದರೆ ಬ್ಯಾಂಕ್ ಗಳು ನೆರವು ನಿರಾಕರಿಸಿದ್ದು, ಇಂದು ರಾತ್ರಿಯಿಂದಲೇ ಎಲ್ಲಾ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಭಾರತದ ಮತ್ತೊಂದು ಬೃಹತ್ ವಿಮಾನಯಾನ ಸಂಸ್ಥೆಯಾದ ಜೆಟ್ ಏರ್ ವೇಸ್ 8 ಸಾವಿರ ಕೋಟಿ ರುಪಾಯಿ ಸಾಲದಲ್ಲಿ ಸಿಲುಕಿದ್ದು, ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಮೊನ್ನೆಯಷ್ಟೇ ಜೆಟ್ ಏರ್ ವೇಸ್ ಸಂಸ್ಥಾಪಕ, ಮಾಜಿ ಮುಖ್ಯಸ್ಥ ನರೇಶ್ ಗೊಯಲ್ ಅವರು ನಷ್ಟದಲ್ಲಿರುವ ಸಂಸ್ಥೆಯ ಷೇರು ಖರೀದಿಸುವುದಿಲ್ಲ ಎಂದು ಹೇಳಿದ್ದರು.