ಕಾಸರಗೋಡು: ರಾಜ್ಯ ಸರಕಾರದ ಕಾಯಕಲ್ಪಂ ಪ್ರಶಸ್ತಿ ಲಭಿಸಿದ ಬೆನ್ನಿಗೆ ರಾಷ್ಟ್ರೀಯ ಅಂಗೀಕಾರವೂ ಲಭಿಸಿರುವುದು ಕಯ್ಯೂರು ಕುಟುಂಬ ಆರೋಗ್ಯ ಕೇಂದ್ರದ ತುರಾಯಿಗೆ ಚಿನ್ನದ ಗರಿಯಾಗಿದೆ.
ಆರೋಗ್ಯ ಕೇಂದ್ರಗಳ ಗುಣಮಟ್ಟ ಅಳೆಯುವ ನ್ಯಾಷನಲ್ ಕ್ವಾಲಿಟಿ ಅಶ್ಯರೆನ್ಸ್ ಸ್ಟಾಂಡರ್ಡ್ ಸರ್ಟಿಫಿಕೇಷನ್ ಶೇ 99 ಅಂಕ ನೀಡುವ ಮೂಲಕ ದೇಶದ ಅತ್ಯುತ್ತಮ ಕುಟುಂಬ ಆರೋಗ್ಯ ಕೇಂದ್ರವಾಗಿ ಕಯ್ಯೂರಿನ ಆರೋಗ್ಯ ಸಂಸ್ಥೆಯನ್ನು ಆಯ್ಕೆ ಮಾಡಿದೆ. ಆರೋಗ್ಯ ಸೇವೆ ವಲಯದಲ್ಲಿ ದೇಶವೇ ಗಮನಿವಷ್ಟು ಗುಣಮಟ್ಟವನ್ನು ಕಾಪಾಡಿಕೊಂಡಿರುವ ಕಯ್ಯೂರು ಕುಟುಂಬ ಆರೋಗ್ಯ ಕೇಂದ್ರ ಜಿಲ್ಲೆಗೆ ಅಭಿಮಾನ ತಂದಿದೆ.
ಇಲ್ಲಿನ ರೋಗಿ ಸ್ನೇಹೀ ವಾತಾವರಣ, ಖಾಸಗಿ ಆಸ್ಪತ್ರೆಗಿಗೂ ಪೈಪೋಟಿ ನೀಡುವಷ್ಟರ ಮಟ್ಟಿಗಿನ ಸೌಲಭ್ಯಗಳು, ಹತ್ತು ಮಂದಿಗೆ ತೀವ್ರನಿಗಾ ಘಟಕ ಸಹಿತ ದಾಖಲಾತಿ ಚಿಕಿತ್ಸೆ, ಅತ್ಯುತ್ತಮ ಫಾರ್ಮಸಿ, ಅತ್ಯಾಧುನಿಕ ಪ್ರಯೋಗಾಲಯ, ಫಿಸಿಯೋ ಥೆರಪಿ, ಹೊರರೋಗಿ ಚಿಕಿತ್ಸಾ ವಿಭಾಗ , ಪಾಲಿಯೇಟಿವ್ ಶುಶ್ರೂಷೆ ವಿಭಾಗ , ಮಕ್ಕಳ ಸೌಹಾರ್ದ ಕೊಠಡಿಗಳು ಇತಾದಿಗಳು ಸಂಸ್ಥೆಯ ಗಮನಾರ್ಹ ವಿಭಾಗಗಳಾಗಿವೆ.
ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ರೋಗ ಪ್ರತಿರೋಧ ಚಟುವಟಿಕೆಗಳು, ರೋಗ ಪತ್ತೆ ಶಿಬಿರಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಇತ್ಯಾದಿ ಅತ್ಯುತ್ತಮ ರೀತಿಯಲ್ಲಿ ನಡೆಸುವಲ್ಲೂ ಈ ಸಂಸ್ಥೆ ಗಮನಾರ್ಹ ಸಾಧನೆ ನಡೆಸಿದೆ. ವೈಜ್ಞಾನಿಕ ರೀತಿ ತ್ಯಾಜ್ಯ ಪರಿಷ್ಕರಣೆ, ಮಳೆ ನೀರು ಸಂಗ್ರಹಾಗಾರ, ಸೌರಶಕ್ತಿ ಬಳಕೆ, ಆಕರ್ಷಕ ಆಸ್ಪತ್ರೆ ಆವರಣ, ರೋಗಿಗಳಿಗೆ ವಿಶ್ರಾಂತಿ ಕೊಠಡಿಗಳು, ಶುದ್ಧ ನೀರಿನ ಲಭ್ಯತೆ, ಹರ್ಬಲ್ ಗಾರ್ಡನ್, ಜೈವಿಕ ತರಕಾರಿ ಕೃಷಿ ಇತ್ಯಾದಿಗಳು ಈ ಸಂಸ್ಥೆಯ ಗರಿಮೆಗಳಾಗಿವೆ.
ಮೂವರು ವೈದ್ಯರು, 4 ದಾದಿಯರು, ಮಹಿಳಾ-ಪುರುಷ ವಿಭಾಗದಲ್ಲಿ ತಲಾ ಒಬ್ಬ ಆರೋಗ್ಯ ಇನ್ಸ್ ಪೆಕ್ಟರ್ ರು, ಇವರ ವ್ಯಾಪ್ತಿಯಲ್ಲಿ 13 ಕಿರಿಯ ಆರೋಗ್ಯ ಇನ್ಸ್ ಪೆಕ್ಟರರು, ಇಬ್ಬರು ಪಾರ್ಮಸಿಸ್ಟ್ ಗಳು, ಒಬ್ಬ ಪ್ರಯೋಗಾಲಯ ಪರಿಣತ, ಹತ್ತು ಮಂದಿ ಕರಾರು ಮೇರೆಗಿನ ನೌಕರರು ಹೀಗೆ 45 ಮಂದಿ ಸಿಬ್ಬಂದಿ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
1971ರಲ್ಲಿ ಗ್ರಾಮೀಣ ಡಿಸೈನ್ಸರಿ ರೂಪದಲ್ಲಿ ಈ ಸಂಸ್ಥೆ ಆರಮಭಗೊಂಡಿತ್ತು. ನಂತರ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಬಡ್ತಿಪಡೆಯಿತು. 2017ರಲ್ಲಿ ಕುಟುಂಬ ಆರೋಗ್ಯ ಕೇಂದ್ರವಾಗಿ ಔನ್ನತ್ಯ ಸಾಧಿಸಿತ್ತು. ಎಂಡೋಸಲ್ಪಾನ್ ಪ್ಯಾಕೆಜ್ ನ ಮೂಲಕ ಕೇಂದ್ರ ಸರಕಾರ ವತಿಯಿಂದ ನೂತನ ಕಟ್ಟಡ ಸೌಲಭ್ಯವೂ ಲಭಿಸಿತ್ತು. ಪ್ರತಿದಿನ 125 ಮಂದಿ ರೋಗಿಗಳು ಈ ಆಸ್ಪತ್ರೆಯನ್ನು ಆಶ್ರಯಿಸುತ್ತಿದ್ದಾರೆ.
ಕಯ್ಯೂರು-ಚೀಮೇನಿ ಗ್ರಾಮಪಂಚಾಯತ್ ನ 20 ಸಾವಿರ ಂದಿ ಜನತೆಯ ಪ್ರಧಾನ ಆಶ್ರಯವೂ ಈ ಸಂಸ್ಥೆಯಾಗಿದೆ ಎಂದು ಇಲ್ಲಿನ ವೈದ್ಯಾಧಿಕಾರಿ ಡಾ.ಪಿ.ವಿ.ಅರುಣ್ ತಿಳಿಸಿದರು. ಸಮಾಜ ಮತ್ತು ವಿವಿಧ ಸರಕಾರಿ ಏಜೆನ್ಸಿಗಳ ಸಹಕಾರವೂ ಈ ಸಾಧನೆಗೆ ಸಹಕಾರಿಯಾಗಿದೆ ಎಂದವರು ಈ ವೇಳೆ ತಿಳಿಸಿದರು.