ಅಮರಾವತಿ: ಗುರುವಾರ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಕೆಲವು ಮತಗಟ್ಟೆಗಳಲ್ಲಿ ಮಧ್ಯರಾತ್ರಿಯವರೆಗೂ ಮತದಾನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲಾಗಿದೆ. ಇದರಿಂದಾಗಿ ಒಟ್ಟಾರೇ ಮತದಾನ ಶೇ . 80ರ ಸನ್ನಿಹಕ್ಕೆ ತಲುಪಿದೆ.
ಕೆಲವು ಕಡೆಗಳಲ್ಲಿ ಟಿಡಿಪಿ ಹಾಗೂ ವೈಎಸ್ ಆರ್ ಕಾಂಗ್ರೆಸ್ ನಡುವಿನ ಘರ್ಷಣೆಯಿಂದಾಗಿ ಇಬ್ಬರು ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿತ್ತು.
ಗುಂಟೂರು, ಕೃಷ್ಣಾ, ನೆಲ್ಲೂರು ಮತ್ತು ಕರ್ನೂಲು ಜಿಲ್ಲೆಗಳಲ್ಲಿ ಕೆಲವು ಮತಗಟ್ಟೆಗಳಲ್ಲಿ ಮಧ್ಯರಾತ್ರಿಯವರೆಗೂ ಮತದಾನ ನಡೆದಿದೆ. ಸಂಜೆ 6 ಗಂಟೆಯಿಂದಲೂ ಸರತಿ ಸಾಲಿನಲ್ಲಿ ನಿಂತಿದ್ದ ಎಲ್ಲರಿಗೂ ಮತದಾನ ಮಾಡಲು ಸಂಬಂಧಿಸಿದ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು.
ಇವಿಎಂ ದೋಷ ಹಾಗೂ ಘರ್ಷನೆಯಿಂದಾಗಿ 400 ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಗಿ ಸಾಗಿತ್ತು. ಗುಂಟೂರು ಜಿಲ್ಲೆಯ ಮಂಗಳಗಿರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಗ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ಚುನಾವಣ ಆಯೋಗದ ವೈಫಲ್ಯತೆ ಖಂಡಿಸಿ ಪ್ರತಿಭಟನೆ ನಡೆಸಿದ್ದರು.
ಇದಕ್ಕೆ ಪ್ರತಿಯಾಗಿ ವೈಎಸ್ ಆರ್ ಕಾಂಗ್ರೆಸ್ ಕೂಡಾ ಪ್ರತಿಭಟನೆ ನಡೆಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು.ವಿಜಯವಾಡ ಹಾಗೂ ಕರ್ನೂಲು ಜಿಲ್ಲೆಯಲ್ಲೂ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು.
25 ಲೋಕಸಭಾ ಹಾಗೂ 175 ವಿಧಾನಸಭಾ ಕ್ಷೇತ್ರಗಳಿಗೆ ನಿನ್ನೆ ಏಕಕಾಲದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಹಿಂಸಾಚಾರ ವರದಿಗಳು ದಾಖಲಾಗಿದ್ದವು.