ಬದಿಯಡ್ಕ: ಬದಿಯಡ್ಕ ಹಾಗೂ ಮಾನ್ಯದಲ್ಲಿ ಉಪಶಾಖೆಗಳನ್ನು ಹೊಂದಿ ಊರಿನ ಜನತೆಗೆ ತನ್ನ ಸೇವೆಯನ್ನು ನೀಡುತ್ತಿರುವ ನೀರ್ಚಾಲಿನ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ನ ಶತಮಾನೋತ್ಸವ ಸಂಭ್ರಮ, ನವೀಕೃತ ಕಟ್ಟಡದ ಲೋಕಾರ್ಪಣೆ ಜೂ.1 ರಂದು ನಡೆಯಲಿದೆ.
ಸಮಾರಂಭದಲ್ಲಿ ಬ್ಯಾಂಕ್‍ನ ಮಾಹಿತಿಗಳು, ಸಹಕಾರಿ ವಲಯಕ್ಕೆ ಸಂಬಂಧಿಸಿದ ಲೇಖನಗಳು ಒಳಗೊಂಡ ಸ್ಮರಣ ಸಂಚಿಕೆ `ಶತ ಸಹಕಾರ ಪಥ'ವು ಬಿಡುಗೊಳ್ಳಲಿದೆ. ಅನೇಕ ಹಿರಿಯರು ಗಣ್ಯರು ಭಾಗವಹಿಸಲಿರುವ ವಿವಿಧ ಕಾರ್ಯಕ್ರಮವು ಬೆಳಿಗ್ಗೆ 9.30ರಿಂದ ರಾತ್ರಿ 9.30ರ ತನಕ ವೈವಿಧ್ಯಮಯವಾಗಿ ನಡೆಯಲಿದೆ. ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಧ್ವಜಾರೋಹಣಗೈದು, ಬ್ಯಾಂಕ್‍ನ ಹಿರಿಯ ಸದಸ್ಯ ಕಾನತ್ತಿಲ ಮಹಾಲಿಂಗ ಭಟ್ ದೀಪಜ್ವಲನೆಯೊಂದಿಗೆ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡುವರು. ನವೀಕೃತ ಕಟ್ಟಡವನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಉದ್ಘಾಟಿಸುವರು. ಕನ್ನಡದೋಜ ದಿ.ಪೆರಡಾಲ ಕೃಷ್ಣಯ್ಯ, ದಿ.ಈಶ್ವರ ಭಟ್ ಖಂಡಿಗೆ, ದಿ.ಮಹಾಲಿಂಗ ಭಟ್ ಖಂಡಿಗೆ, ದಿ. ಖಂಡಿಗೆ ನಾರಾಯಣ ಭಟ್ ಕೇರ, ದಿ.ಶ್ಯಾಮ ಭಟ್ ಖಂಡಿಗೆ, ದಿ. ಖಂಡಿಗೆ ಶ್ರೀಕೃಷ್ಣ ಭಟ್ ಕೇರ ಅವರ ಭಾವಚಿತ್ರಗಳ ಅನಾವರಣ ನಡೆಯಲಿದೆ.
ವಿವಿಧ ವಿಚಾರಗೋಷ್ಠಿ, ಭಾವಸಂಗಮ, ಹಾಗೂ ಅಪರಾಹ್ನ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ 6ರಿಂದ 9.30ರ ತನಕ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.