ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ(ಮೇ 10) ವಿಚಾರಣೆ ನಡೆಸಲಿದೆ.
ನ್ಯಾಯಮೂರ್ತಿಗಳಾದ ಎಸ್. ಎ. ಬೊಬ್ಬೆ, ಡಿ.ವೈ. ಚಂದ್ರಚೂಡ, ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಝೀರ್ ಸೇರಿದಂತೆ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ವಿಚಾರಣೆ ನಡೆಸಲಿದೆ.
ಈ ಹಿಂದೆ ಐವರು ಸದಸ್ಯರ ನ್ಯಾಯಪೀಠ ಅಯೋಧ್ಯೆ ಪ್ರಕರಣ ಇತ್ಯರ್ಥಕ್ಕಾಗಿ ಮೂವರು ಸಂಧಾನಕಾರರ ಸಮಿತಿಯನ್ನು ನೇಮಕ ಮಾಡಿತ್ತು. ಇದೀಗ ಮೇ 10ರಿಂದ ಈ ಸಂಧಾನಕಾರರು ನೀಡಿರುವ ವರದಿಯ ವಿಚಾರಣೆ ನಡೆಯಲಿದೆ.
ಕಳೆದ ಮಾರ್ಚ್ 8ರಂದು ಸರ್ವೋಚ್ಚ ನ್ಯಾಯಾಲಯವು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಮೂರ್ತಿ ಎಫ್ ಎಂ ಐ ಖಲಿಫುಲ್ಲಾ ನೇತೃತ್ವದ ಮೂವರು ಸದಸ್ಯರ ಸಂಧಾನಕಾರರಿಗೆ ಈ ಸೂಕ್ಷ್ಮ ಪ್ರಕರಣ ಇತ್ಯರ್ಥಕ್ಕೆ ಅವಕಾಶ ಕಲ್ಪಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಕರಣವು ನ್ಯಾಯಾಲಯದ ಮುಂದೆ ಬರಲಿದೆ.
ನ್ಯಾಯಮೂರ್ತಿ ಖಲಿಫುಲ್ಲಾ ಅವರಲ್ಲದೆ ಶ್ರೀಶ್ರೀ ರವಿಶಂಕರ್ ಗುರೂಜಿ, ಹಿರಿಯ ವಕೀಲರಾದ ಶ್ರೀರಾಮ್ ಪಂಚು ಸಂಧಾನಕಾರರ ಸಮಿತಿಯ ಸದಸ್ಯರಾಗಿದ್ದಾರೆ.ಕೋರ್ಟ್ ಈ ಸಮಿತಿಗೆ ಒಟ್ಟು ನಾಲ್ಕು ವಾರಗಳಲ್ಲಿ ಸಂಧಾನ ಮಾತುಕತೆ ಮುಗಿಸಿ ಎಂಟು ವಾರಗಳಲ್ಲಿ ವರದಿ ನೀಡಬೇಕೆಂದು ಆದೇಶ ನೀಡಿತ್ತು.