ಕಾಸರಗೋಡು: ಹೈಯರ್ ಸೆಕೆಂಡರಿ ಸೇ, ಇಂಪ್ರೂವ್‍ಮೆಂಟ್ ಪರೀಕ್ಷೆಗಳು ಜೂ. 10ರಿಂದ 17ರವರೆಗೆ ನಡೆಯಲಿವೆ. ಬೆಳಿಗ್ಗೆ 9.30ರಿಂದ ಹಾಗೂ ಅಪರಾಹ್ನ 2 ಗಂಟೆಯಿಂದ ಪರೀಕ್ಷೆಗಳು ನಡೆಯಲಿವೆ. ಪ್ರಾಯೋಗಿಕ ಪರೀಕ್ಷೆಗಳಿರುವ ವಿಷಯಗಳಿಗೆ ಕೂಲ್ ಆಫ್ ಟೈಮ್ ಸಹಿತ ಎರಡೂಕಾಲು ಗಂಟೆ ಹಾಗೂ ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಕೂಲ್ ಆಫ್ ಟೈಮ್ ಸಹಿತ ಎರಡೂ ಮುಕ್ಕಾಲು ಗಂಟೆ ಪರೀಕ್ಷೆ ನಡೆಯಲಿದೆ.
ಸಂಗೀತಕ್ಕೆ ಕೂಲ್ ಆಫ್ ಟೈಮ್ ಸಹಿತ ಒಂದು ಮುಕ್ಕಾಲು ಗಂಟೆ ಪರೀಕ್ಷೆ ನಡೆಯಲಿದೆ. 2019ರ ಮಾರ್ಚ್‍ನ ದ್ವಿತೀಯ ವರ್ಷ ಪರೀಕ್ಷೆಯಲ್ಲಿ ಮೊದಲ ಬಾರಿಗೆ ನೋಂದಣಿ ನಡೆಸಿ ಪರೀಕ್ಷೆ ಬರೆದ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗದ ವಿಷಯಗಳಿಗೆ ಸೇ ಪರೀಕ್ಷೆ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತೀರ್ಣವಾಗದ ಎಲ್ಲ ವಿಷಯಗಳಿಗೆ ಸೇ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕಂಪಾರ್ಟ್‍ಮೆಂಟಲ್ ಪರೀಕ್ಷೆ ಬರೆದು ಒಂದು ವಿಷಯದಲ್ಲಿ ಮಾತ್ರವೇ ಅನುತ್ತೀರ್ಣರಾದವರಿಗೆ ಆ ವಿಷಯಕ್ಕೆ ಮಾತ್ರ ಸೇ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ವಿಭಾಗದವರಿಗೆ ಒಂದಕ್ಕಿಂತ ಹೆಚ್ಚು ವಿಷಯಗಳಲ್ಲಿ ಡಿ ಗ್ರೇಡ್ ಅಥವಾ ಅದಕ್ಕಿಂತ ಕಡಿಮೆ ಗ್ರೇಡ್ ಆಗಿದ್ದರೆ ಅರ್ಜಿ ಸಲ್ಲಿಸಲು ಅರ್ಹತೆ ಇರುವುದಿಲ್ಲ.
2019ರ ಮಾರ್ಚ್‍ನಲ್ಲಿ ಮೊದಲ ಬಾರಿ ಪರೀಕ್ಷೆ ಬರೆದ ರೆಗ್ಯುಲರ್ ವಿದ್ಯಾರ್ಥಿಗಳು ಎಲ್ಲ ವಿಷಯಗಳಿಗೆ ಡಿ ಪ್ಲಸ್ ಗ್ರೇಡ್ ಅಥವಾ ಅದಕ್ಕಿಂತ ಹೆಚ್ಚು ಲಭಿಸಿದವರಾಗಿದ್ದರೆ ಯಾವುದಾದರೂ ಒಂದು ವಿಷಯಕ್ಕೆ ತಮ್ಮ ಅಂಕಗಳನ್ನು ಹೆಚ್ಚಿಸುವುದಕ್ಕಾಗಿ ಇಂಪ್ರೂವ್‍ಮೆಂಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ದ್ವಿತೀಯ ವರ್ಷ ಥಿಯರಿ ಪೇಪರ್‍ಗಳಿಗೆ ಮಾತ್ರ ಸೇ, ಇಂಪ್ರೂವ್‍ಮೆಂಟ್ ಪರೀಕ್ಷೆ ಇರಲಿದೆ. ಸೇ, ಇಂಪ್ರೂವ್‍ಮೆಂಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮೇ 15 (ಇಂದು) ಕೊನೆಯ ದಿನಾಂಕವಾಗಿದೆ. ಸೇ ಪರೀಕ್ಷೆಗೆ 500 ರೂ. ಶುಲ್ಕವಾಗಿದೆ. ಇದರ ಹೊರತು ಪ್ರಮಾಣಪತ್ರ ಶುಲ್ಕವಾಗಿ 40 ರೂ. ಪಾವತಿಸಬೇಕು.
ವೇಳಾ ಪಟ್ಟಿ: ಜೂ. 10ರಂದು ಬೆಳಿಗ್ಗೆ ಅಕೌಂಟೆನ್ಸಿ, ಹಿಸ್ಟರಿ, ಇಸ್ಲಾಮಿಕ್ ಹಿಸ್ಟರಿ ಆಂಡ್ ಕಲ್ಚರ್, ಕಮ್ಯೂನಿಕೇಟಿವ್ ಇಂಗ್ಲಿಷ್, ಎಲೆಕ್ಟ್ರಾನಿಕ್ಸ್ ಸರ್ವಿಸ್ ಟೆಕ್ನಾಲಜಿ, ಅಪರಾಹ್ನ ಫಿಸಿಕ್ಸ್, ಜಿಯೋಗ್ರಫಿ, ಮ್ಯೂಸಿಕ್, ಗಾಂಧಿಯನ್ ಸ್ಟಡೀಸ್, ಇಂಗ್ಲಿಷ್ ಲಿಟರೇಚರ್.
ಜೂ. 11ರಂದು ಬೆಳಿಗ್ಗೆ ಎಕನಾಮಿಕ್ಸ್, ಜರ್ನಲಿಸಂ, ಅಪರಾಹ್ನ ಜಿಯೋಲಜಿ, ಸ್ಟಾಟಿಸ್ಟಿಕ್ಸ್, ಕಂಪ್ಯೂಟರ್ ಅಪ್ಲಿಕೇಶನ್, ಹೋಂ ಸೈನ್ಸ್. ಜೂ. 12ರಂದು ಬೆಳಿಗ್ಗೆ ಬಿಸಿನೆಸ್ ಸ್ಟಡೀಸ್, ಸೋಶಿಯೋಲಜಿ, ಫಿಲಾಸಫಿ, ಆಂತ್ರಾಲಜಿ, ಅಪರಾಹ್ನ ಕೆಮಿಸ್ಟ್ರಿ, ಸಂಸ್ಕೃತ ಶಾಸ್ತ್ರ, ಪೊಲಿಟಿಕಲ್ ಸೈನ್ಸ್.
ಜೂ. 13ರಂದು ಬೆಳಿಗ್ಗೆ ಭಾಗ ಒಂದು ಇಂಗ್ಲಿಷ್, ಭಾಗ 2 ಭಾಷೆಗಳು, ಮಾಹಿತಿ ತಂತ್ರಜ್ಞಾನ. ಜೂ. 17ರಂದು ಬೆಳಿಗ್ಗೆ ಗಣಿತ, ಭಾಗ 3 ಭಾಷೆಗಳು, ಸೈಕಾಲಜಿ, ಸಂಸ್ಕೃತ ಸಾಹಿತ್ಯ, ಅಪರಾಹ್ನ ಸೋಶಿಯಲ್ ವರ್ಕ್, ಬಯಾಲಜಿ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಪರೀಕ್ಷೆ ನಡೆಯಲಿದೆ.
ಮರು ಮೌಲ್ಯಮಾಪನಕ್ಕೆ ಅರ್ಜಿ ಆಹ್ವಾನ: ಪ್ಲಸ್‍ಟು ಮರುಮೌಲ್ಯ ಮಾಪನ, ಉತ್ತರ ಪತ್ರಿಕೆಗಳ ಪ್ರತಿ, ಸೂಕ್ಷ್ಮ ತಪಾಸಣೆಗೆ ಮೇ 15ರ ಮೊದಲು ಅರ್ಜಿ ಸಲ್ಲಿಸಬೇಕು. ಇಮ್ಮಡಿ ಮೌಲ್ಯಮಾಪನ ನಡೆದ ಕೆಮಿಸ್ಟ್ರಿ, ಫಿಸಿಕ್ಸ್, ಗಣಿತ ವಿಷಯಗಳಿಗೆ ಮರುಮೌಲ್ಯಮಾಪನ ಅಥವಾ ಸೂಕ್ಷ್ಮ ತಪಾಸಣೆ ನಡೆಯುವುದಿಲ್ಲ. ಆದರೆ ಈ ವಿಷಯಗಳ ಉತ್ತರ ಪತ್ರಿಕೆಗಳ ಪ್ರತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆ ಬರೆದ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಮರುಮೌಲ್ಯಮಾಪನಕ್ಕೆ 500 ರೂ., ಸೂಕ್ಷ್ಮ ಪರಿಶೀಲನೆಗೆ 100 ರೂ. ಹಾಗೂ ಉತ್ತರಪತ್ರಿಕೆಗಳ ಪ್ರತಿಗೆ 300 ರೂ. ಒಂದು ಪೇಪರ್‍ನ ಶುಲ್ಕವಾಗಿದೆ. ಮೇ 15ರ ಬಳಿಕ ಲಭಿಸುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ವಿದ್ಯಾಭ್ಯಾಸ ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.