ನವದೆಹಲಿ: ಉಗ್ರರ ತಂಡವೊಂದು ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿ ಕಾರ್ಯಾಚರಣೆಗೆ ಇಳಿದಿದೆ ಎಂಬ ಸಂಗತಿ ಹೊರಬಿದ್ದಿರುವುದು ಆತಂಕ ಮೂಡಿಸಿದೆ.
ಕೆಲ ಯುವಕರು ತಂಡವೊಂದನ್ನು ರಚಿಸಿಕೊಂಡು ದಾಳಿ ನಡೆಸುವ ಬಗ್ಗೆ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ತಮಿಳುನಾಡಿನ 10 ಕಡೆಗಳಲ್ಲಿ ರಾಷ್ಟ್ರೀಯ ವಿಚಾರಣಾ ದಳದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಕಡಲೂರಿನ ಲಾಲ್ ಪೆಟ್ ಪ್ರದೇಶದಲ್ಲಿ ಅಬ್ದುಲ್ ರಷೀದ್ ಎಂಬಾತನ ಮನೆಯಲ್ಲಿ ಶೋಧ ಕಾರ್ಯಾರಣೆ ನಡೆಸಿದ್ದು, ಮೂರು ಲ್ಯಾಪ್ ಟಾಪ್ ಗಳು, ಮೂರು ಹಾರ್ಡ್ ಡಿಸ್ಕ್ ಗಳು, 16 ಮೊಬೈಲ್ ಪೋನ್ ಗಳು ಹಾಗೂ ಎಂಟು ಸೀಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ಸಂದರ್ಭದಲ್ಲಿ ರಷೀದ್ ಮನೆಯಲ್ಲಿ ಇರಲಿಲ್ಲ,
ರಷೀದ್ ಇರಾಖ್ ಹಾಗೂ ಸಿರಿಯಾದ ಐಎಸ್ ಐಎಸ್ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾನೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತೂಪೇಟೆ, ಕೀಲಾಕಾರೈ, ದೇವಿಪಟ್ಟಿನಂ, ಲಾಲ್ ಪೇಟೆ, ಸೇಲಂ ಮತ್ತಿತರ ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನ 10 ಮಂದಿ ವಾಟ್ಸಾಪ್ ನಲ್ಲಿ ಖಾತೆ ತೆರೆದು ಉಗ್ರ ಕೃತ್ಯವೆಸಗುವ ಬಗ್ಗೆ ಚರ್ಚೆ ನಡೆಸಿದ್ದಾರೆ. ದಕ್ಷಿಣ ಭಾರತದ ಪ್ರತಿಷ್ಠಿತ ದೇವಸ್ಥಾನಗಳು, ಚರ್ಚ್ ಗಳು, ಐಷರಾಮಿ ಹೋಟೆಲ್ ಗಳು, ಹಾಗೂ ಬಾರ್ ಆಂಡ್ ರೆಸ್ಟೋರೆಂಟ್ ಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಂಕಿತ 10 ಮಂದಿಯ ಪೈಕಿ ಒಂಬತ್ತು ಮಂದಿಯನ್ನು ಈ ಹಿಂದೆಯೇ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ನಂತರ ಅವರೆಲ್ಲರೂ ತಲೆ ಮರೆಸಿಕೊಂಡಿದ್ದರು ಎಂದು ರಾಷ್ಟ್ರೀಯ ವಿಚಾರಣಾ ದಳದ ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ ಕರ್ನಾಟಕದಲ್ಲಿ ಅಹಿತಕರ ಘಟನೆಗೆ ಆಸ್ಪದ ಇಲ್ಲದಂತೆ ಬೆಂಗಳೂರಿನಲ್ಲಿ ಈಗಾಗಲೇ ಸಾಕಷ್ಟು ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಗರದಲ್ಲಿ ಬಂದೋಬಸ್ತ್ ಗೆ ಪೊಲೀಸರ ಕೊರತೆ ಇಲ್ಲ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಒಂದು ತುಕಡಿಯನ್ನು ಮೆಟ್ರೋ ಭದ್ರತೆಗಾಗಿಯೇ ನಿಯೋಜಿಸಲಾಗಿದ್ದು, ಜನಸಂದಣಿ ಹೆಚ್ಚಿರುವ ಎಲ್ಲ ಸ್ಥಳಗಳಲ್ಲಿ ನಿಗಾ ವಹಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.