HEALTH TIPS

ಸಮರಸ-ಈ ಹೊತ್ತಿಗೆ ಹೊಸ ಹೊತ್ತಗೆ-11-ಪುಸ್ತಕ -ಅಲೆಯೊಳಗಿನ ಮೌನ (ಗಜಲ್ ಸಂಕಲನ)

   
     ಪುಸ್ತಕ: ಅಲೆಯೊಳಗಿನ ಮೌನ (ಗಜಲ್ ಸಂಕಲನ)
     ಲೇಖಕರು: ಶ್ರೀದೇವಿ ಕೆರೆಮನೆ
        ಬರಹ: ಚೇತನಾ ಕುಂಬಳೆ.
     ಉತ್ತರ ಕನ್ನಡ ಜಿಲ್ಲೆಯ ಹಿರೇಗುತ್ತಿನವರಾದ ಶ್ರೀದೇವಿ ಕೆರೆಮನೆಯವರು ಕಾರವಾರದ ಸಿ ಬರ್ಡ ನಿರಾಶ್ರಿತರ ಪುನರ್ವಸತಿ ಕೇಂದ್ರದ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲೂ ಸ್ನಾತಕೋತ್ತರ ಪದವಿ ಪಡೆದ ಇವರು ಓದು ಬರಹದೊಂದಿಗೆ ಶಂಕದಿಂದ ಕಲಾಕೃತಿಯನ್ನು ತಯಾರಿಸಬಲ್ಲ ಪ್ರತಿಭಾವಂತರು. ಅಂಕಣ ಬರಹಗಳ, ಕವನ ಹಾಗೂ ಕಥಾ ಸಂಕಲನಗಳನ್ನು ಈಗಾಗಲೇ ಸಾರಸ್ವತ ಲೋಕಕ್ಕೆ ನೀಡಿದ ಇವರು ಗಜಲ್ ಪ್ರಕಾರದಲ್ಲೂ ತನ್ನ ಪ್ರತಿಭೆಯನ್ನು ತೋರಿಸಿ *ಅಲೆಯೊಳಗಿನ ಮೌನ* ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಗಜಲ್ ಲೋಕದಲ್ಲಿ ಮಿಂಚುತ್ತಿದ್ದಾರೆ. ಇವರ ಶಿಕ್ಷಣ ಸೇವೆಗೆ ಅತ್ಯುತ್ತಮ ಶಿಕ್ಷಣ ಪ್ರಶಸ್ತಿ2016 ಅಲ್ಲದೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
     ಶ್ರೀದೇವಿ ಕೆರೆಮನೆಯವರ *ಅಲೆಯೊಳಗಿನ ಮೌನ* ಕ್ರಾಂತಿ ಪ್ರಕಾಶನದಿಂದ ಬಿಡುಗಡೆಯಾದ ಮೊದಲ ಗಜಲ್ ಸಂಕಲನ. ಪೋಲಿಸ್ ವೃತ್ತಿಯಲ್ಲಿರುವ ಸೋಮು ರೆಡ್ಡಿಯವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ರಾಂತಿ ಪ್ರಕಾಶನ ಇತ್ತೀಚೆಗಷ್ಟೆ ಬೆಳಕು ಕಂಡಿತು. ಸಮಾನತೆಯ ಸಮಾಜ ಕಟ್ಟುವ ಸದುದ್ದೇಶದೊಂದಿಗೆ ಸಾಹಿತ್ಯದ ಎಲ್ಲ ಪ್ರಕಾರದ, ನಾಡಿನ ಹಿರಿಯ- ಕಿರಿಯರ ಪುಸ್ತಕಗಳನ್ನು ಪ್ರಕಟಿಸುತ್ತಾ ಬರುತ್ತಿದೆ. ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರು ಈ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಗಜಲ್ ಪ್ರಕಾರದ ಸಂಕ್ಷಿಪ್ತ ಮಾಹಿತಿ ನೀಡುವುದರೊಂದಿಗೆ ಇಲ್ಲಿನ ಗಜಲ್ ಗಳ ಕುರಿತು ಮಾತನಾಡುತ್ತಾರೆ. "ಗಜಲನ್ನು ಅಕ್ಷರ ರೂಪದಲ್ಲಿ ಓದುವುದಕ್ಕಿಂತ ಕವಿಯ ಕಂಠಸಿರಿಯಲ್ಲಿ ಕೇಳುವುದು ತುಂಬಾ ಸೂಕ್ತ . ಕವಿ ಮತ್ತು ಕೇಳುಗ ಸಮೂಹ ಏಕ ಕಾಲಕ್ಕೆ 'ದಿಲ್ ಖುಷ್' ಆಗುವಾಗ ಗಜಲ್ ತುಂಬ ಅರ್ಥಪೂರ್ಣವಾಗಲು ಸಾಧ್ಯ" ಎಂದು ಹೇಳುತ್ತಾರೆ. .ಈ ಸಂಕಲನಕ್ಕೆ ಸಿದ್ದರಾಮ ಹಿರೇಮಠ ಕೂಡ್ಲಿಗಿ ಬೆನ್ನುಡಿ ಬರೆದಿದ್ದಾರೆ.
     ಈ ಸಂಕಲನದಲ್ಲಿ ಒಟ್ಟು 56 ಗಜಲ್ ಗಳಿವೆ. ಗಜಲ್ ಗಳಿಗೆ ರೇಖಾ ಚಿತ್ರಗಳನ್ನೂ ಅಳವಡಿಸಲಾಗಿದೆ. ಇಲ್ಲಿರುವ ಅಲೆಯೊಳಗಿನ ಒಂದೊದೇ ಮೌನಗಳನ್ನು ಓದುತ್ತಾ ಹೋದಂತೆ ಮನಸ್ಸಿನಲ್ಲಿ ಹಲವಾರು ಭಾವಗಳು ಬಂದು ಹೋಗುತ್ತವೆ.ಲೇಖಕರು  "ಈ ಜಗತ್ತು ಪ್ರೀತಿ ಎನ್ನುವ ತಳಹದಿಯ ಮೇಲೆ ನಿಂತಿದೆ. ಪ್ರೀತಿ ಜಗದ ಸ್ಥಾಯಿಭಾವ ಕೂಡ ಹೌದು. ಉಳಿದೆಲ್ಲ ಭಾವಗಳು ಪ್ರೀತಿಯನ್ನು ಸುತ್ತುವರಿದ ಭಾವಗಳು. ಹೀಗಾಗಿ ಬಹುತೇಕ ಕವಿತೆಗಳಿಗೆ/ ಕವಿಗಳಿಗೆ ಪ್ರಿತಿಯೇ ಮೂಲವಸ್ತು. ಪ್ರೀತಿಯ ತೀವ್ರ ಅನುಭೂತಿಯನ್ನು, ವಿರಹದ ಉತ್ಕಂಠತೆಯನ್ನು ಸಾದರಪಡಿಸಲು ಗಜಲ್ ನಷ್ಟು ಉತ್ತಮ ಕಾವ್ಯ ಪ್ರಕಾರ ಇನ್ನೊಂದಿಲ್ಲ". ಎಂದು ಹೇಳುತ್ತಾರೆ. ಅವನ ಬಾಹು ಬಂಧನದ ಬಿಗುವಿನಲ್ಲಿ ಮಳೆಹನಿಗೆ ಮುಖವೊಡ್ಡಿ ನಿಲ್ಲಬೇಕೆಂದು ಹಂಬಲಿಸುತ್ತಾರೆ. ಹಾಗೆಯೇ , ಸಂಜೆಯಾಗಸದಲ್ಲಿ ಮೂಡಿದ ಬಣ್ಣಗಳನ್ನೆಲ್ಲ ಕದ್ಧು ಮನದೊಳಗೆ 'ಅವನ' ಚಿತ್ರ ಬಿಡಿಸುವ ಪ್ರಯತ್ನ ಮಾಡುತ್ತಾರೆ.  ಮೌನದಲ್ಲೇ ಆತನೊಡನೆ ಕೈಹಿಡಿದು ನಡೆಯಲು, ಮಾತು-ಪ್ರೀತಿಮುನಿಸು-ವಿರಹ ಎಲ್ಲವನ್ನೂ ಆತನೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ.  ಇತರರಿಗಾಗಿ ಮನದ ಪರಿಶೆಗೆ ಕಡಿವಾಣ ಹಾಕಿದ್ದರಿಂದ ಜೀವನೋತ್ಸಾಹವನ್ನೂ, ಉಲಿವ ಕಂಠಕ್ಕೆ ಬೀಗ ಹಾಕಿದ್ಧರಿಂದ ಮೌನಿಯಾದೆಯೆಂದೂ, ಕಣ್ಣಿಗೆ ಪಟ್ಟಿ ಕಟ್ಟಿದ್ದರಿಂದ ಜಗದ ಕತ್ತಲನ್ನೆಲ್ಲ ಆಹ್ವಾನಿಸಿಕೊಂಡು ಕುರುಡಿಯಾದೆನೆಂದೂ, ತನುಮನಕ್ಕೆ ಕಾವಲಿರಿಸಿದ್ದರಿಂದ ತನ್ನದೆಲ್ಲವನ್ನು ಕಳೆದುಕೊಂಡು ಬರಡು ಬಂಜರಾದೆ ಎಂಬಲ್ಲಿ ಸಮಾಜದಲ್ಲಿ ಹೆಣ್ಣಿನ ಪರಿಸ್ಥಿತಿಯನ್ನು ಎಳೆಎಳೆಯಾಗಿ ವಿವರಿಸುವರು. ಹಾಗೆಯೇ ಹೆಣ್ಣು ಕರುಣೆಯ ಕೊಳದಲ್ಲಿ ಬೇರೇನೂ ಮಾಡಲರಿಯದ ಸಿರಿ ದೇವತೆಗಳು ಎಂದು ಹೆಣ್ಣನ್ನು ವ್ಯಾಖ್ಯಾನಿಸುತ್ತಾರೆ.
     ಕತ್ತಿಗಿಂತಲೂ ಹರಿತವಾದದ್ದು ಮಾತು,  ಅಸ್ತ್ರಕ್ಕಿಂತಲೂ ಮೌನ ನಯವಾಗಿ ಕೊಲ್ಲುತ್ತದೆ, ನೆನಪುಗಳಿಗೂ ಎದೆ ಕೊರೆಯುವ, ಸುಖದ ಗಳಿಗೆಗಳಿಗೂ ಕೊರಳೆತ್ತಿ ಸಾಯಿಸುವ ಶಕ್ತಿಯಿದೆ ಎನ್ನುತ್ತಾರೆ. ಪ್ರೀತಿ ಪಾತ್ರರಾರೂ ಜೊತೆಗಿರುವುದಿಲ್ಲ. ಬಂದವರು ಒಂದು ಮಾತನ್ನೂ ಆಡದೆ ತಿರುಗಿ ನೋಡದೆ ಹೋಗಬೇಕೆಂಬ ಜೀವನದ ಕಟುಸತ್ಯವನ್ನು ಮನದಟ್ಟು ಮಾಡಿಸುತ್ತಾರೆ. ಒಂದುಕಡೆ ಮಾತನ್ನು ಕತ್ತಿಗಿಂತಲೂ ಹರಿತವೆಂದರೂ, ಅದೇ ಅವನು ಆಡಿದ ಮಾತಿಗೆ ತನ್ನನ್ನು ಬದುಕಿಸುವ ಶಕ್ತಿಯಿದೆ ಎನ್ನುತ್ತಾರೆ. ಅವನಿಲ್ಲದ ಬದುಕನ್ನು ಕಾರ್ಕೋಟಕನಿಗೂ, ಹಾಗಲದ ಜೊತೆಗಿನ ಬೇವಿಗೂ ಹೋಲಿಸುತ್ತಾರೆ. ಆತನಿಲ್ಲದೆ ತುಟಿಯ ರಂಗು,  ಕಣ್ಣಿನ ಹೊಳಪಿನ ಅರ್ಥದೊಂದಿಗೆ ತನ್ನ ಬದುಕಿನ ಸಿರಿಯೇ ಕಳೆದಿದೆ ಎನ್ನುವಲ್ಲಿ ಆತನಿಗೆ ತನ್ನ ಬದುಕಿನಲ್ಲಿ ಎಷ್ಟು ಮಹತ್ವ ನೀಡುತ್ತಾರೆ ಎಂಬುದನ್ನು ಅರ್ಥೈಸಬಹುದು. ನನ್ನ ನೋವುಗಳನ್ನು ನಿನಗೆ ನೀಡಲಾರೆ, ಅವುಗಳಿಗೆ ನನ್ನದೇ ಹೆಗಲು ಸಾಕು ಆದರೆ ನಲಿವಿಗೆ ನಿನ್ನೆದೆಗೆ ಜೋತುಬೀಳಬೇಕು ಎಂಬಲ್ಲಿ ಅವನ ಮೇಲಿದ್ದ ಅಪಾರ ಪ್ರೀತಿಯನ್ನು ಕಾಣಬಹುದು.  ಮಧುಶಾಲೆ, ಮದಿರೆ, ಸಾಕಿ ಮೊದಲಾದವರು ಆಗಾಗ ಅತಿಥಿಗಳಂತೆ ಬಂದು ಭೇಟಿ ನೀಡುವುದನ್ನೂ ಗಮನಿಸಬಹುದು. ಅವನು ಬರುವ ಹಾದಿಗೆ ಗುಲ್ ಮೊಹರ್ ಹಾಸಿ, ಮಲ್ಲಿಗೆ ಚಪ್ಪರವ ದಾರಿಯುದ್ದಕ್ಕೂ ಹಾಸಿ ಕೈಯಲ್ಲಿ ಗುಲಾಬಿ ಹಿಡಿದು, ಮುನಿಸು-ಹಠ ತೊರೆದು ಒಲವ ಹರಿಸಲೆಂದು ಆತನ ಬರುವಿಕೆಗಾಗಿ ಕಾಯುತ್ತಿರುವ ಹೆಣ್ಣಿನ ಚಿತ್ರಣವನ್ನು ಮನೋಹರವಾಗಿ ಕಣ್ಣಿಗೆ ಕಟ್ಟುವಂತೆ ನೀಡಿದ್ಧಾರೆ.
ಹೀಗೆ  ಈ ಗಜಲ್ ಗಳಲ್ಲಿ  ಅವನ ನವಿರು ಸ್ಪರ್ಶದ ಬಿಸಿಯಿದೆ. ಮಾತು ಮೌನ ಮುನಿಸು ವಿರಹ ಪ್ರೀತಿ ಮೊದಲಾದ ಭಾವಗಳೂ ಒಂದರೊಳಗೊಂದು ಮೇಳೈಸಿವೆ. ಹೆಣ್ಣಿನ ಎದೆಯಾಳದ ತಲ್ಲಣಗಳು, ನಿರೀಕ್ಷೆಗಳು, ಬಯಕೆಗಳಿವೆ..

ಒಂದಿಷ್ಟು ಎದೆಗಿಳಿದ ಸಾಲುಗಳು:

" ಉಂಡರೆಷ್ಟು,ತಿಂದರೆಷ್ಟು, ಆಯಸ್ಸು ಮುಗಿದ ಮೇಲೆ
ಕ್ಷಣ ಕಾಲವೂ ಕಾಯದೆ ಇಲ್ಲಿಂದ ಹಂಗು ತೊರೆಯಬೇಕಲ್ಲವೇ?"

"ನೀನು ಉತ್ತ ಭೂಮಿಯಲ್ಲಿ ಸಸಿಯೊಂದು ಮೊಳಕೆಯಾಗಲೆಂದು ಕಾದೆ
ನಾನು ಬಸಿರೊಳಗೆ ಕದಿರ ತೆನೆ ಹೊತ್ತು 'ಸಿರಿ' ತುಂಬಿ ತೊನೆದಾಡಿದೆ"

"ನಾನು ನಿಮ್ಮ ನೋವನ್ನು ಜಗತ್ತಿಗೇ ತೆರೆದಿಡುವ ಗಟ್ಟಿ ಧ್ವನಿಯಾದೆ"

"ನಡುರಾತ್ರಿಯಲ್ಲೇ ಸುಖದ ನಿಟ್ಟುಸಿರೊಂದು ಎದೆಯಾಳದಿಂದ ಚಿಮ್ಮುವುದು"

"ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬಿತೆಂದು ಅರ್ಥವಾಗಲಿಲ್ಲ ನನಗೆ
ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ"

"ಎಲ್ಲರ ನೋವನ್ನೂ ನನ್ನದಾಗಿಸಿಕೊಂಡು ಕಣ್ಣೀರಾದೆ
ನನ್ನ ಸಂಕಟದ ಆಕ್ರಂದನಕ್ಕೆ ಕಣ್ಣಂಚೂ ಒದ್ದೆಯಾಗಲಿಲ್ಲ"

                                               ಬರಹ: ಚೇತನಾ ಕುಂಬ್ಳೆ
                                                   Feebback:samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries