ಉಪ್ಪಳ: ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕುಡುಡಪದವು ಇದರ ಈ ಬಾರಿಯ ವಾರ್ಷಿಕ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ವಿದ್ಯಾರ್ಥಿಗಳ ಐದು ಯಕ್ಷಗಾನ ಬಯಲಾಟಗಳು ಮೇ 11ರಂದು ಕುರುಡಪದವು ವಿಠಲಶಾಸ್ತ್ರಿ ಸ್ಮಾರಕ ಪ್ರೌಢ ಶಾಲೆಯಲ್ಲಿ ಜರಗಲಿದೆ.
ಈ ಬಾರಿಯ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರಶಸ್ತಿಗೆ ತೆಂಕುತಿಟ್ಟಿನ ಅನುಭವಿ, ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್, ಭಾಗವತ ಕುರಿಯ ಗಣಪತಿ ಶಾಸ್ತ್ರಿ ಪ್ರಾಯೋಜಿತ ನೆಡ್ಲೆ ನರಸಿಂಹ ಭಟ್ ಸ್ಮಾರಕ ಪ್ರಶಸ್ತಿಗೆ ಹಿರಿಯ ಅನುಭವಿ ಕಲಾವಿದ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಕರುವೋಳು ದೇರಣ್ಣ ಶೆಟ್ಟಿ ಪ್ರಶಸ್ತಿಗೆ ಹಿರಿಯ ಕಲಾವಿದ ಕುಡಾನ ಗೋಪಾಲಕೃಷ್ಣ ಭಟ್ ಅರ್ಹರಾಗಿದ್ದಾರೆ. ಪ್ರಶಸ್ತಿ ವಿಜೇತರೆಲ್ಲರೂ ತೆಂಕುತಿಟ್ಟಿನ ಗತಕಾಲದಲ್ಲಿ ರಂಗವನ್ನು ವೈಭವಿಸಿ ಮೆರೆದ ಕಲಾವಿದರಾಗಿದ್ದು, ಕುರಿಯ ಮನೆತನದ ಜೊತೆ ಕಲಾಸಂಬಂಧ ಇರಿಸಿ ಬೆಳೆದವರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಮೇ11ರಂದು ಸಂಜೆ 4ರಿಂದ ಕಲಾವಿದೆ ಪ್ರಣತಿ ಚೈತನ್ಯಕೃಷ್ಣ ಪದ್ಯಾಣ ಇವರ ಭರತನಾಟ್ಯ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಲಿದೆ. ಬಳಿಕ 5ರಿಂದ 7ರ ತನಕ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ದಕ್ಷಯಜ್ಞ ಆಖ್ಯಾನದ ಯಕ್ಷಗಾನ ಬಯಲಾಟ ಜರಗಲಿದೆ. ಬಳಿಕ ಜರಗುವ ಸಭಾಸಮಾರಂಭದಲ್ಲಿ ಪಾರ್ತಿಸುಬ್ಬ ಯಕ್ಷಗಾನ ಕಲಾಕೇಂದ್ರದ ಮಾಜಿ ಅಧ್ಯಕ್ಷ ಶಂಕರ ರೈ ಮಾಸ್ತರ್ ಅಧ್ಯಕ್ಷತೆ ವಹಿಸಲಿದ್ದು, ಕುರಿಯ ವಿಠಲ ಶಾಸ್ತ್ರಿಗಳ ಕುರಿತಾಗಿ ಖ್ಯಾತ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಸಂಸ್ಮರಣಾ ಭಾಷಣ ಮಾಡುವರು. ಬಳಿಕ ಪ್ರಶಸ್ತಿ ಪ್ರದಾನ ನಡೆಯಲಿದ್ದು, ನ್ಯಾಯವಾದಿ ಪೆರುವೋಡಿ ರಾಮಕೃಷ್ಣ ಭಟ್ ಅಭಿನಂದನಾ ಭಾಷಣ ಮಾಡುವರು.
ಕುರುಡಪದವು ಪ್ರೌಢಶಾಲೆ ಕೇಂದ್ರೀಕರಿಸಿ ಗುರು ಬಾಯಾರು ರಮೇಶ ಶೆಟ್ಟಿ ನಾಟ್ಯ ನಿರ್ದೇಶನದಲ್ಲಿ ಕುರಿಯ ವಿಠಲಶಾಸ್ತ್ರಿ ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಸಕ್ರಿಯವಾಗಿ ಕಾರ್ಯಚರಿಸುತ್ತಿದ್ದು, ಈ ಪರಿಸರದ ಸುಮಾರು 50ರಷ್ಟು ವಿದ್ಯಾರ್ಥಿಗಳು ಯಕ್ಷಗಾನ ಶಿಕ್ಷಣ ಪಡೆಯುತ್ತಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಇಲ್ಲಿನ ವಿದ್ಯಾರ್ಥಿಗಳಿಂದ ಅನುಕ್ರಮವಾಗಿ ಪಂಚವಟಿ, ಅಗ್ರಪೂಜೆ, ಧರ್ಮಸಂಘರ್ಷ, ದುಶ್ಶಾಸನವಧೆ ಪ್ರಸಂಗದ ಬಯಲಾಟಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಜೆಯಿಂದ ಬೆಳಿಗ್ಗಿನ ತನಕ ವಿದ್ಯಾರ್ಥಿಗಳಿಂದಲೇ 5 ಪ್ರಸಂಗಗಳು ಪ್ರದರ್ಶನಗೊಳ್ಳುವುದು ವಿಶೇಷವಾಗಿದ್ದು, ತೆಂಕಣ ಯಕ್ಷಗಾನದ ಕಾಶಿಯೆಂದೇ ಕೊಂಡಾಡಲ್ಪಟ್ಟ ಕುರಿಯ ಮನೆತನದ ಪೋಷಣೆಯಲ್ಲಿ ಮತ್ತೆ ಯಕ್ಷಗಾನ ಪ್ರತಿಭೆಗಳು ಚಿಗುರುವುದರ ಸಂಕೇತವಾಗಿದೆ.