ಪುಸ್ತಕ: ತಿರುವುನ್ನು ತಿರುವಿದಾಗ
ಕವಿ:ಬಿ.ಎಸ್.ಯೇತಡ್ಕ
ಲೇಖನ: ಚೇತನಾ ಕುಂಬಳೆ.
ಬಿ.ಎಸ್ ಯೇತಡ್ಕ ಅವರ ಹೆಸರು ನನ್ನ ಗಮನಕ್ಕೆ ಬಂದದ್ದೇ ಇತ್ತೀಚೆಗೆ. ಅವರೊಬ್ಬ ಬರಹಗಾರರೆಂದು ತಿಳಿದದ್ದು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನೋಡಿದಾಗಷ್ಟೇ. ಅವರ ಕಾರ್ಯಕ್ರಮದಲ್ಲಿ ಮೊದಲ ಭೇಟಿಯೊಂದಿಗೆ ಪರಿಚಯವೂ ಆಯ್ತು. ಅವರ ಸರಳ ವ್ಯಕ್ತಿತ್ವ, ಮಿತಭಾಷೆ, ಎಲ್ಲರೊಂದಿಗೂ ಪ್ರೀತಿಯಿಂದ ಮಾತನಾಡಿಸುವ ಗುಣ ಇಷ್ಟವಾಯಿತು.
ಕಾರ್ಯಕ್ರಮದಲ್ಲಿ ತಿರುವು ಕಥಾ ಸಂಕಲನವನ್ನು ಪರಿಚಯಿಸುವುದರೊಡನೆ "ಕೃತಿ ಆಪ್ತವೂ ಅರ್ಥವೂ ಆದರೆ ಅದು ಸಾರಸ್ವತ ಲೋಕದಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ" ಎಂಬ ದುರ್ಗಾಕುಮಾರ್ ನಾಯರ್ಕೆರೆಯವರು ಹೇಳಿದ ಮಾತು ಮನಸ್ಸಿಗೆ ತಟ್ಟುತ್ತದೆ.
ಈ ಸಂಕಲನಕ್ಕೆ ಜಾನಪದ ಸಂಶೋಧಕರೂ, ಲೇಖಕರೂ ಆದ ಡಾ. ಸುಂದರ ಕೇನಾಜೆಯವರು ಮುನ್ನುಡಿ ಬರೆದಿದ್ದಾರೆ. "ವಸ್ತುವೊಂದು ಸಿಕ್ಕಾಗ ಅದನ್ನು ಕತೆಯಾಗಿಸುವ ತಂತ್ರವನ್ನು ಬಳಸಿಕೊಂಡವ ಕತೆಗಾರನಾಗುತ್ತಾನೆ. ಇಲ್ಲಾ ಅದೇ ವ್ಯಕ್ತಿ ವರದಿಗಾರನಾಗುತ್ತಾನೆ. ವರದಿಗಾರನೋರ್ವ ಕತೆಗಾರನಾಗಬೇಕಾದರೆ ಆತನಲ್ಲಿ ಇರಲೇಬೇಕಾದ ಸಂವೇಧನಾಶೀಲ ಗುಣವಿರಬೇಕು. ಮತ್ತು ಇರಲೇ ಬಾರದ ಸೃಜನಶೀಲ ಗುಣವೂ ಇರಬೇಕು. ಈ ಎರಡು ಗುಣಗಳಿರುವ ವರದಿಗಾರ ಕತೆಗಾರನಾಗುತ್ತಾನೆ" ಎನ್ನುವ ಮಾತಿಗೆ ಲೇಖಕ ಬಿ.ಎಸ್ ಯೇತಡ್ಕ ಅವರನ್ನೇ ಉದಾಃ ನೀಡುತ್ತಾರೆ ಕೇನಾಜೆಯವರು. ಈ ಸಂಕಲನಕ್ಕೆ ಬಹುಭಾಷಾ ನಟರೂ, ನಿರ್ದೇಶಕರೂ, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರೂ ಆಗಿರುವ ಕಾಸರಗೋಡು ಚಿನ್ನಾ ಅವರು ಬೆನ್ನುಡಿ ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬದುಕು ತೀರಾ ಯಾಂತ್ರಿಕವಾಗುತ್ತಿರುವುದನ್ನು ಗಮನಿಸಬಹುದು. ಅಲ್ಲಿ ಭಾವನೆಗಳು, ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಜನಪರ ಕಾಳಜಿ, ಸಮಾಜಮುಖಿ ಚಿಂತನೆಗಳು, ಸೇವಾ ಮನೋಭಾವ, ವಿರಳವಾಗುತ್ತಿವೆ. ಬದುಕಿನ ಭದ್ರತೆ ಹೊಂದಿರುವ ಸಬಲರು ಮತ್ತು ಅಶಕ್ತ ಜನಸಾಮಾನ್ಯರ ನಡುವಿನ ಸಂಪರ್ಕ ಸೇತುವೆಯಾಗಿ, ಜನ ಸಾಮಾನ್ಯರ ಬದುಕಿನಲ್ಲಿ ಬೆಳಕು ಮೂಡಿಸುವ ಉದ್ದೇಶದಿಂದ ಒಂದಷ್ಟು ಸಮಾನ ಮನಸ್ಕರು ಜೊತೆ ಸೇರಿಕೊಂಡು ರೂಪೀಕರಿಸಿದ ಸಂಸ್ಥೆಯೇ 'ಸ್ನೇಹ ಹಸ್ತ ಚಾರಿಟೇಬಲ್ ಟ್ರಸ್ಟ್'. ಈ ಸಂಸ್ಥೆ ತಮ್ಮ ಸದಸ್ಯರಾದ ಬಿ. ಎಸ್. ಯೇತಡ್ಕ ಅವರ ಕಥಾ ಸಂಕಲನವನ್ನು ಹೊರತಂದು ಅವರ ಬರವಣಿಗೆಗೂ, ಸಾಹಿತ್ಯಕ್ಕೂ ಪ್ರೋತ್ಸಾಹ ನೀಡಿರುವುದು ನಿಜಕ್ಕೂ ಶ್ಲಾಘನೀಯ.
ಬಿ.ಎಸ್ ಯೇತಡ್ಕ ಅವರ ಚೊಚ್ಚಲ ಕಥಾ ಸಂಕಲನವೇ 'ತಿರುವು'. ಇದರಲ್ಲಿ ಒಟ್ಟು 13 ಕತೆಗಳಿವೆ. ಸರಳ ಭಾಷೆ, ನಿರೂಪಣಾ ಶೈಲಿ, ವೈವಿಧ್ಯಮಯ ಕಥಾ ವಸ್ತುಗಳಿಂದ ಓದುಗರ ಗಮನ ಸೆಳೆಯುತ್ತವೆ. ಇತ್ತೀಚೆಗಂತೂ ಒತ್ತಡದ ಬದುಕಿನಲ್ಲಿ ಪುಸ್ತಕವನ್ನು ಪ್ರೀತಿಸುವವರು, ಓದುವ ಹವ್ಯಾಸವನ್ನು ಬೆಳೆಸಿಕೊಂಡವರು ತುಂಬಾ ವಿರಳ. ಎಲ್ಲರೂ ಅವರವರ ಕೆಲಸದ ಮಧ್ಯೆ ಬ್ಯುಜಿಯಾಗಿರುವಾಗ ಪುಸ್ತಕಗಳತ್ತ, ಸಾಹಿತ್ಯದತ್ತ ಗಮನ ಹರಿಸುವುದಂತೂ ದೂರದ ಮಾತು. ಸಹೃದಯ ಓದುಗರ ಸಂಖ್ಯೆ ಕುಂಠಿತಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸಾ?ಹಿತ್ಯವನ್ನು ಇಷ್ಟ ಪಡುವ, ಪುಸ್ತಕವನ್ನು ಪ್ರೀತಿಸುವ, ಓದುವ ವರ್ಗವೊಂದು ನಮ್ಮ ಮಧ್ಯೆ ಇದೆ ಎನ್ನುವುದೇ ಸಂತಸದ ವಿಷಯ. ಇತ್ತೀಚೆಗೆ ಸಮಯದ ಅಭಾವದಿಂದ ಓದುಗರೂ ದೀರ್ಘ ಬರಹಗಳನ್ನು ಇಷ್ಟ ಪಡದಿರುವುದನ್ನೂ ಕಾಣಬಹುದು. ಅಂತಹ ಓದುಗರಿಗೆ ಇದು ಒಳ್ಳೆಯ ಕೃತಿ . ಯಾಕೆಂದರೆ ಇಲ್ಲಿಯ ಕತೆಗಳೆಲ್ಲವೂ ಸಣ್ಣದಾಗಿದ್ದು, ಒಂದೆರಡು ಗಂಟೆಯೊಳಗೆ ಓದಿ ಮುಗಿಸುವಂಥದ್ದಾಗಿದೆ. ಈ ಸಂಕಲನದ ಒಂದು ಪ್ರತ್ಯೇಕತೆಯೇನೆಂದರೆ, ಆರಂಭದ ಹಾಗೂ ಮುಕ್ತಾಯದ ಕತೆಗಳೆರಡೂ 'ವಾಸ್ತವ' ಎಂಬ ಒಂದೇ ಶೀರ್ಷಿಕೆಯನ್ನೊಳಗೊಂಡಿದ್ದರೂ ಕಥಾವಸ್ತು ವಿನಲ್ಲಿ ಭಿನ್ನತೆಯನ್ನೊಳಗೊಂಡಿವೆ.
ಮೊದಲ ಕತೆ *ವಾಸ್ತವ* ದಲ್ಲಿ ಲೇಖಕರ ಕಲ್ಪನೆಯಲ್ಲಿ ವಿಷಯವೊಂದು ಕಥಾರೂಪ ಪಡೆದು ಸುಖಾಂತ್ಯವನ್ನು ಕಾಣುವಾಗ, ವಾಸ್ತವದಲ್ಲಿ ಅಂಥದ್ದೇ ಘಟನೆ ದುಖಾಂತ್ಯಗೊಂಡದ್ದು ಗಮನಿಸಬಹುದು.ಇಲ್ಲಿ ಲೇಖಕರು ಕಲ್ಪನೆ ಮತ್ತು ವಾಸ್ತವದ ನಡುವೆ ಒಂದು ಸಂಬಂಧವನ್ನು ಕಲ್ಪಿಸುವುದನ್ನು ಕಾಣಬಹುದು. *ತಿರುವು* ಕತೆಯಲ್ಲಿ ಬಡತನದಿಂದ ಬಾಲ್ಯದಲ್ಲಿ ಊರು ಬಿಟ್ಟ ಕಥಾನಾಯಕ ಬಹಳ ವರುಷಗಳ ನಂತರ ಊರಿಗೆ ಮರಳಿದಾಗ ಊರಲ್ಲಾದ ಬದಲಾವಣೆಗಳನ್ನು ಕಂಡು ಅಚ್ಚರಿ ಪಡುವುದನ್ನು, ನಗರದ ಬದಲಾವಣೆಯ ಪ್ರಭಾವ ಹಳ್ಳಿಯವರೆಗೂ ಹರಡಿದ್ದನ್ನು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದನ್ನು ವಿವರಿಸುತ್ತಾ ಆತನ ಗೆಳೆಯನ ಆತ್ಮಹತ್ಯೆಯ ಹಿಂದಿನ ರಹಸ್ಯವನ್ನು ಬಯಲು ಮಾಡದೆ ಓದುಗರಲ್ಲಿ ಕುತೂಹಲ ಮೂಡಿಸುತ್ತಾರೆ.
ಆಧುನಿಕತೆಯ ಪ್ರಭಾವದಿಂದ ಯುವ ಪೀಳಿಗೆ ಸಂಬಂಧಗಳಿಗೆ ಬೆಲೆ ಕಲ್ಪಿಸದೆ ಹಿರಿಯರನ್ನು , ಹೆತ್ತವರನ್ನು ತಾತ್ಸಾರದಿಂದ ನೋಡುವ ಪರಿಯನ್ನು ಮನ ಮುಟ್ಟುವಂತೆ *ಸಂಬಂಧ* ಕತೆಯಲ್ಲಿ ತಿಳಿಸಲಾಗಿದೆ.
*ಸಮಾಂತರ ರೇಖೆಗಳು* ಕತೆಯಲ್ಲಿ, ಪತಿಪತ್ನಿಯರು ಸಂಸಾರ ರಥದ ಎಡು ಚಕ್ರಗಳಿದ್ದಂತೆ. ಒಬ್ಬರು ಮುಗ್ಗರಿಸಿದರೂ ಬದುಕಿನ ಬಂಡಿ ಸುಸೂತ್ರವಾಗಿ ಮನ್ನಡೆಯಲು ಸಾಧ್ಯವಿಲ್ಲ. ಬದುಕಿನಲ್ಲಿ, ಬಾಹ್ಯ ಸೌಂದರ್ಯ, ಹಣ, ಆಸ್ತಿಗಳೇ ಪ್ರಧಾನವಲ್ಲ. ಶಾಶ್ವತವೂ ಅಲ್ಲ. ಅವೆಲ್ಲ ಒಂದು ಭಾಗವಷ್ಟೇ ಹೊರತು ಅವುಗಳೇ ಸರ್ವಸ್ವವಲ್ಲ. ಜೀವನದಲ್ಲಿ ಪ್ರೀತಿ, ಹೊಂದಾಣಿಕೆ, ನಂಬಿಕೆಗಳೇ ಪ್ರಧಾನವಾದದ್ದು. ಪತಿ ಪತ್ನಿಯರ ನಡುವೆ ಹೊಂದಾಣಿಕೆಯಿಲ್ಲದಿದ್ದರೆ, ಅವರು ಸಮಾನಾಂತರ ರೇಖೆಗಳಂತೆ, ಅವು ಎಂದೂ ಪರಸ್ಪರ ಸಂಧಿಸುವುದಿಲ್ಲ, ಅಂತ್ಯಗೊಳ್ಳುವುದೂ ಇಲ್ಲ,ಎನ್ನುತ್ತಾರೆ.
*ಮೋಹ* ಕತೆಯಲ್ಲಿ ಇಬ್ಬರು ಆಪ್ತ ಸ್ನೇಹಿಚರ ಜೀವನ ಕ್ರಮಗಳನ್ನು ತಿಳಿಸುತ್ತಾರೆ. ಪಠ್ಯ ಪುಸ್ತಕದ ಪಾಠಕ್ಕೂ ಅನುಭವದ ಪಾಠಕ್ಕೂ ನಡುವಿನ ಅಜಗಜಾಂತರ ವ್ಯತ್ಯಾಸವನ್ನು ವಿವರಿಸುವರು. ಆತ್ಮೀಯವಾಗಿ ಮಾತನಾಡಿಸುವ ನಿಷ್ಕಲ್ಮಶ ಪ್ರೀತಿ ತೋರುವ ಮಹಿಳೆಯ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದುವವರನ್ನು ಎಚ್ಚರಿಸುವ ಧ್ವನಿಯೊಂದಿದೆ.
ಹಳ್ಳಿಗಳೂ ನಗರಗಳಾಗಿ ಬದಲಾಗುತ್ತಿರುವ ಈ ಆಧುನಿಕ ಯುಗದಲ್ಲೂ ಹೆಣ್ಣಿನ ಬಗೆಗಿನ ಧೋರಣೆಗಳು ಮಾತ್ರ ಬದಲಾಗುತ್ತಿಲ್ಲ. ಗಂಡು ಮಗುವಿನಾಗಮನವನ್ನು ಸಂಭ್ರಮಿಸುವ, ಹೆಣ್ಣೆಂದೊಡನೆ ಅಸಡ್ಡೆ ತೋರುವ ಸಮಾಜದ ಮನಸ್ಥಿತಿಯ ವಾಸ್ತವ ಚಿತ್ರಣವನ್ನು *ನ್ಯಾಯ* ಕತೆಯಲ್ಲಿ ಕಾಣಬಹುದು. ಇಬ್ಬರು ತಾಯಂದಿರು ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದಾಗ, ಈ ಜಟಿಲ ಸಮಸ್ಯೆಗೆ ಪರಿಹಾರ ಸೂಚಿಸಲಾಗದೆ ನ್ಯಾಯಾಧೀಶರು ಬುದ್ಧಿವಂತಿಕೆಯಿಂದ ತೀರ್ಪನ್ನು ಮುಂದೂಡಿ ಓದುಗರಿಗೆ ಬಿಟ್ಟುಕೊಟ್ಟಿರುವುದನ್ನು ನೋಡಬಹುದು.
ಇಲ್ಲಿನ ಕತೆಗಳಲ್ಲಿ, ಪುರುಷನ ಅಹಂಕಾರಕ್ಕೆ ಹೆಣ್ಣಿನ ಬಾಳು ನಾಶವಾಗಿ ತನ್ನದಲ್ಲದ ತಪ್ಪಿಗೆ ಸಮಾಜದ ದೃಷ್ಟಿಯಲ್ಲಿ ಹುಚ್ಚಿಯ ಪಟ್ಟವನ್ನಲಂಕರಿಸಬೇಕಾದ ದುಸ್ಥಿತಿಯ, ಮನಕಲಕುವ ಚಿತ್ರಣವಿದೆ. ರೈತರ ಸಮಸ್ಯೆಗಳೊಂದಿಗೆ,ಕನಸು ಸುಂದರವಾಗಿದ್ದರೂ ವಾಸ್ತವ ಕಹಿಯಾಗಿರುವುದೆಂಬ ಸತ್ಯದ ಅರಿವಿದೆ. ಇತ್ತೀಚೆಗೆ ಕೇರಳ ಹಾಗೂ ಕೊಡಗಿನಲ್ಲಿ ನಡೆದ ಪ್ರಳಯವನ್ನು ಮತ್ತೊಮ್ಮೆ ನೆನಪಿಸುವ ಕತೆಯಿದೆ, ಪಾಶ್ಚಾತ್ಯ ಸಂಸ್ಕೃತಿಯ ಸಲಿಂಗ ಕಾಮದ ವಿಷಯವಿದೆ, ಚೆಲುವಾದ ಹುಡುಗಿಯನ್ನು ಕಂಡಾಗ ಮನದಲ್ಲಿ ಮೂಡಿದ ಭಾವಗಳು ಕನಸುಗಳು ನುಚ್ಚುನೂರಾದ ಭಗ್ನಪ್ರೇಮಿಯೊಬ್ಬನನ್ನು ಪರಿಚಯಿಸುವರು. ಕೊನೆಯ *ವಾಸ್ತವ* ಕತೆಯಲ್ಲಿ, ಹೆಣ್ಣು ನಾಲ್ಕು ಗೋಡೆಯ ಮಧ್ಯದಿಂದ ಮುಗಿಲೆತ್ತರಕ್ಕೆ ಹಾರಿ ಸಾಧನೆ ಗೈದರೂ ಆಕೆಯ ಬಗೆಗಿನ ದೃಷ್ಠಿಕೋನ ಬದಲಾಗದಿರುವುದು, ಮಾಲತಿ ಸುಂದರ ಪುರುಷನ ಕೆನ್ನೆಗೆ ಬಾರಿಸುವ ಮೂಲಕ ಒಂದು ಎಚ್ಚರಿಕೆಯನ್ನು ನೀಡುವುದನ್ನು ಗಮನಿಸಬಹುದು.
ಹೀಗೆ ಇಲ್ಲಿನ ಕತೆಗಳು ಚಿಕ್ಕದಾಗಿ ಬೇಗನೆ ಓದಿಸಿಕೊಂಡು ಹೋಗುತ್ತವೆ. ಭಿನ್ನ ಕಥಾ ವಸ್ತುಗಳನ್ನು ಹೊಂದಿದ್ದು. ಕೆಲವೊಂದು ಇಷ್ಟವಾಗುತ್ತವೆ. ಮತ್ತೊಂದಿಷ್ಟು ಚಿಂತನೆಗೆ ಹಚ್ಚುತ್ತವೆ. ಈ ಕತೆಗಳಲ್ಲಿ ಹಲವು ಪಾತ್ರಗಳಲ್ಲಿ ಲೇಖಕರು ಕಾಣಿಸಿಕೊಳ್ಳುತ್ತಾರೆ.
ಸಂವೇದನಾಶೀಲ ವರದಿಗಾರರಾಗಿಯೂ, ಸೃಜನಶೀಲ ಬರಹಗಾರರಾಗಿಯೂ ಗುರುತಿಸಿಕೊಂಡ ಇವರು ಹಲವು ಸಂಘ ಸಂಸ್ಥೆಗಳಲ್ಲಿ ದುಡಿದವರು. ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದವರು. ತಮ್ಮ ಕೆಲಸದ ಒತ್ತಡದಿಂದ ಒಂದಿಷ್ಟು ವರ್ಷ ಎಲೆಮರೆಯ ಕಾಯಂತಿದ್ದವರು. ಈಗ ತಮ್ಮ ಕಥಾ ಸಂಕಲನವನ್ನು ಸಾರಸ್ವತ ಲೋಕಕ್ಕೆ ನೀಡುವುದರ ಮೂಲಕ ತಮ್ಮ ಬರವಣಿಗೆಗೆ ಪುನಃ ಜೀವ ತುಂಬಿದ್ದು ಖುಷಿಯ ವಿಚಾರ. ಇವರ ಲೇಖನಿಯಿಂದ ಇನ್ನಷ್ಟು ಬರಹಗಳು ಉಸಿರಾಡಲಿ, ಓದುಗರನ್ನು ತಲುಪಲಿ, ಇವರ ಸಾಹಿತ್ಯದ ಚಟುವಟಿಕೆಗಳು ನಿರಂತರವಾಗಿ ಸಾಗಲಿ
ಚೇತನಾ ಕುಂಬ್ಳೆ
Feedback: samarasasudhi@gmail.com