HEALTH TIPS

ಸಮರಸ-ಈ ಹೊತ್ತಿಗೆ ಹೊಸ ಹೊತ್ತಗೆ-ಭಾಗ 13-ಅಣುರೇಣು

 
     ಕೃತಿ: ವಿಶ್ವಕರ್ಮ ಸಾಹಿತ್ಯ ದರ್ಶನ ಬಳಗದ ಕೃತಿ ದರ್ಶನ ಯೋಜನೆಯ ಎರಡನೇ ಕೃತಿ "ಅಣುರೇಣು" ಚುಟುಕು ಹನಿಗವನ ಸಂಕಲನ
     ಸಂಪಾದಕ: ಜಯ ಮಣಿಯಂಪಾರೆ
      ಬರಹ: ಚೇತನಾ ಕುಂಬ್ಳೆ
    ವಿಶ್ವಕರ್ಮ ಸಮಾಜದ ಪ್ರತಿಭಾವಂತರನ್ನು, ಕವಿಮನಸ್ಸುಗಳನ್ನು ಹೊರ ಜಗತ್ತಿಗೆ, ಅದರಲ್ಲೂ ಸಾಹಿತ್ಯ ಲೋಕಕ್ಕೆ ಪರಿಚಯಿಸುವ , ಅವರೊಳಗಿನ ಸುಪ್ತ ಪ್ರತಿಭೆಗಳನ್ನು ಹೊರಗೆಳೆಯುವ ಉದ್ದೇಶದಿಂದ 2017ರಲ್ಲಿ 'ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು' ಎಂಬ ವಾಟ್ಸಪ್ ಬಳಗವೊಂದು ಸಮರ್ಥ ಸಂಘಟಕ, ಪತ್ರಕರ್ತರಾದ ಜಯ ಮಣಿಯಂಪಾರೆಯವರ ನೇತೃತ್ವದಲ್ಲಿ ಸೃಷ್ಟಿಗೊಂಡಿತು. ಈ ಬಳಗಕ್ಕೆ ನಿರ್ದಿಷ್ಟ ಉದ್ದೇಶಗಳಿವೆ, ಹಲವು ಕನಸುಗಳಿವೆ, ಒಂದಷ್ಟು ಯೋಜನೆಗಳಿವೆ, ಎಲ್ಲವನ್ನು ಕಾರ್ಯರೂಪಕ್ಕೆ ತರಬೇಕೆಂಬ ಹಂಬಲವಿದೆ, ಛಲವಿದೆ, ಪ್ರಯತ್ನವಿದೆ. ಈಗ ಈ ಬಳಗಕ್ಕೆ ಎರಡನೇ ವರ್ಷದ ಸಂಭ್ರಮ. ಇವರ ಹಲವು ಯೋಜನೆಗಳಲ್ಲಿ ಒಂದು ಕೃತಿ ದರ್ಶನ. ವಿಶ್ವದರ್ಶನ ಸಾಹಿತ್ಯ ದರ್ಶನ ಬಳಗದ ಸದಸ್ಯರಿಂದ ರಚಿತವಾದ ಸಾಹಿತ್ಯವನ್ನು ಹಂಚುವ ಕೆಲಸವಾಗಬೇಕೆಂಬ ಉದ್ಧೇಶದಿಂದ ಹಮ್ಮಿಕೊಂಡ ಯೋಜನೆ ಇದು. ವಿಶ್ವಕರ್ಮ ಸಾಹಿತ್ಯ ಬಳಗದವರ ಕವನಗಳನ್ನು ಸಂಗ್ರಹಿಸಿ 'ಕಾವ್ಯಶಿಲ್ಪ'ಎಂಬ ಸಂಪಾದಿತ ಕೃತಿಯನ್ನು ಬಳಗದ ಪ್ರಥಮ ವರ್ಷದ ಕಾರ್ಯಕ್ರಮ 'ವಿಶ್ವದರ್ಶನ 2018'ರಲ್ಲಿ ಬಿಡುಗಡೆ ಗೊಳಿಸಿದ್ದರು.
ಎರಡನೇ ವರ್ಷದ ಸಂಭ್ರಮದಂಗವಾಗಿ ಜನವರಿ 26, 27ರಂದು ಬದಿಯಡ್ಕದಲ್ಲಿ ನಡೆದ 'ವಿಶ್ವದರ್ಶನ 2019' ದ್ವಿದಿನ ಸಮ್ಮೇಳನದ ಮೊದಲ ದಿನ 'ಅಣುರೇಣು' ಎಂಬ ಚುಟುಕು/ಹನಿಗವನ ಸಂಕಲನ ಬಿಡುಗೊಂಡಿತು. ಮೊದಲ ಕೃತಿ 'ಕಾವ್ಯಶಿಲ್ಪ' ಕವಿತೆಗಳಿಗೆ ಪ್ರಾಧಾನ್ಯತೆ ನೀಡಿದ್ದರೆ, 'ಅಣುರೇಣು' ಚುಟುಕು/ಹನಿಗವನಗಳಿಗೆ ಆಧ್ಯತೆ ನೀಡಿರುವುದನ್ನು ಕಾಣಬಹುದು.
    ಈ ಪುಸ್ತಕದ ಮೊದಲ ಭಾಗದಲ್ಲಿಯೇ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮಿಗಳ ಆಶೀರ್ವಚನವಿದೆ. ಕೃತಿಯ ಸಂಪಾದಕರಾದ ಜಯ ಮಣಿಯಂಪಾರೆಯವರು ಕೃತಿ ದರ್ಶನ ಯೋಜನೆಯ ಸಂಕ್ಷಿಪ್ತ ಮಾಹಿತಿಯನ್ನು 'ಸಂಪಾದಕರ ಸಂಕಲ್ಪ'ದಲ್ಲಿ ನೀಡಿರುವರು.  ಕಾಸರಗೋಡು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕವಿ, ಪತ್ರಕರ್ತರಾದ ವಿರಾಜ್ ಅಡೂರು ಮುನ್ನುಡಿ ಬರೆದಿದ್ದಾರೆ. "ಚಿಕ್ಕ ಒಡಲಿನಲ್ಲಿ ದೊಡ್ಡ ಅರ್ಥವನ್ನು ಹೊಂದಿರುವ ಚುಟುಕು ಸಾಹಿತ್ಯದಲ್ಲಿ ನೇರ ನುಡಿಯದೆ, ನಿಷ್ಠುರ ಸತ್ಯವಿದೆ" ಎಂದು ಹೇಳುತ್ತಾ  ಚುಟುಕು ಸಾಹಿತ್ಯಕ್ಕೆ  ಸುಭಾಷಿತ, ಮುಕ್ತ, ಚಾಟು ಪದ್ಯ, ಚಟೂಕಿ ಎಂಬ ಹೆಸರುಗಳನ್ನು ಪರಿಚಯಿಸುತ್ತಾರೆ.  ಹನಿಗವನ ಪ್ರಕಾರದಲ್ಲಿ ತನ್ನದೇ ವಿಭಿನ್ನ ಛಾಪನ್ನು ಮೂಡಿಸಿ ಸಾರಸ್ವತ ಲೋಕದಲ್ಲಿ ಮಿಂಚುತ್ತಿರುವ  ಶಿಕ್ಷಕರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಈ ಪುಸ್ತಕ್ಕೆ ಬೆನ್ನುಡಿ ಬರೆದು ಪ್ರೋತ್ಸಾಹಿಸಿದ್ಧಾರೆ.  ನಾವು ಯಾವುದೇ ಶುಭ ಕಾರ್ಯದ ಪ್ರಾರಂಭದಲ್ಲಿ ದೇವರನ್ನು ಸ್ಮರಿಸುವುದು ಸಹಜ. ಹಾಗೆಯೇ ಇಲ್ಲಿರುವ ಚುಟುಕುಗಳನ್ನು ಓದುವ ಮೊದಲು ವಿದ್ಯಾದೇವಿ ಸರಸ್ವತಿಯನ್ನು ನೆನೆದಿರುವುದು ಗಮನಾರ್ಹ ಸಂಗತಿ. ಇಲ್ಲಿಂದ ಮುಂದೆ ಭಾವಗಳು ಹನಿಹನಿಯಾಗಿ ಹೊರಹೊಮ್ಮಿರುವುದನ್ನು ನೊಡಬಹುದು.
     'ಅಣುರೇಣು' ಎಂಬ ಚುಟುಕು/ಹನಿಗವನ  ಸಂಕಲನದಲ್ಲಿ 'ವಿಶ್ವಕರ್ಮ ಸಾಹಿತ್ಯ ದರ್ಶನ'ದ 35 ಕವಿಗಳ 329 ಚುಟುಕು ಹಾಗೂ ಹನಿಗವನಗಳಿವೆ. ಇಲ್ಲಿ ಭಿನ್ನವಾದ ಕಾವ್ಯ ವಸ್ತುಗಳಿವೆ. ಭಿನ್ನವಾದ ನಿರೂಪಣಾ ಶೈಲಿ ಇದೆ. ಇಲ್ಲಿರುವ ಒಂದಷ್ಟು ಚುಟುಕುಗಳು ಮನ ತಟ್ಟುತ್ತವೆ. ಮತ್ತೊಂದಿಷ್ಟು ಹನಿಗಳು ಸದ್ದಿಲ್ಲದೆ ಎದೆಗಿಳಿದು ಬಿಡುತ್ತವೆ. ಇಲ್ಲಿರುವ ಕವಿಗಳೆಲ್ಲರೂ ಬೇರೆ ಬೇರೆ ವೃತ್ತಿಗಳಲ್ಲಿದ್ದು ತಮ್ಮ ಬಿಡುವಿನ ಸಮಯವನ್ನು ಬರಹಕ್ಕಾಗಿ ಮೀಸಲಿಡುವವರು. ಸಾಹಿತ್ಯವನ್ನು ಪ್ರೀತಿಸುವವರು.
ಇವರಲ್ಲಿ ಕೆಲವರು ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಸಾಹಿತ್ಯ ರಚಿಸುವ ಸಾಮಥ್ರ್ಯವುಳ್ಳವರು ಇಲ್ಲಿ ಗಮನಿಸ ಬೇಕಾದ ಇನ್ನೊಂದು ವಿಷಯವೇನೆಂದರೆ ಇಲ್ಲಿನ ಕವಿಗಳ ಸಂಕ್ಷಿಪ್ತ ಪರಿಚಯವನ್ನೂ ಈ ಕೃತಿಯಲ್ಲಿ ಕೊಟ್ಟಿದ್ದಾರೆ.
     ಅಕ್ಷಿತಾ ಅವರ ಹನಿಯಲ್ಲಿ ಎದೆಯೊಳಗಿನ ನೋವನ್ನು ತೋರಗೊಡದೆ ಇನ್ನೊಬ್ಬರನ್ನು ಸದಾ ನಗಿಸುವ ಚಾಪ್ಲಿನ್ ನ್ನು ಕಾಣಬಹುದು.
ಕಿಶೋರ್ ಅವರು ದಿನಕರನ್ನು 'ದಿನವಿಡೀ ದುಡಿಯುವ ನೌಕರ' ಎಂದಿದ್ದಾರೆ. ಸತ್ಯವನ್ನು 'ಸುಳ್ಳೆಂಬ ಕತ್ತಲಲ್ಲಿ ಹೊಳೆಯುವ ಮಿಂಚುಹುಳ' ಎನ್ನುತ್ತಾರೆ.
ಮಂಜುನಾಥ್ ಅವರು ಅಪ್ಪನ ಬಗ್ಗೆ ' ನೋವನ್ನೆಲ್ಲ ಒಡಲಲ್ಲಿ ಬಚ್ಚಿಟ್ಟು ದೇವರಂತೆ ಉರಿದು ಮಾಯವಾಗುವ ಜೀವ' ಎಂದಿದ್ಧಾರೆ.
ಪಾವನ ಅವರು 'ರಕ್ತ ಸಂಬಂಧ ಮೀರಿದ ಜಾತಿ ಮತದ ಹಂಗಿಲ್ಲದ, ಹೃದಯಗಳ ನಡುವೆ ಬೆಸೆದ ಬಂಧವೇ ಸ್ನೇಹ ಎನ್ನುತ್ತಾರೆ.
ಮೌನೇಶ್ ಅವರು ಚುಟುಕು ಸಾಹಿತ್ಯದಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಅವರು ಪಟಾಕಿಯಿಂದುಂಟಾಗುವ ಅನಾಹುತದ ಬಗ್ಗೆ ಎಚ್ಚರಿಕೆ ನೀಡುತ್ತಾರೆ
ಲತಾ ಅವರು 'ಪ್ರೀತಿ ಎಂದರೆ ಕಣ್ಣುಗಳಲ್ಲರಳಿದ ನಗುವ ಮಲ್ಲಿಗೆ' ಎಂದು ಹೇಳುತ್ತಾರೆ.
ದೀಕ್ಷಿತ ಅವರು ಒಂದೆಡೆ ನಾಲಗೆಯನ್ನು ಚುಚ್ಚುವ ಹರಿತವಾದ ಆಯುಧಕ್ಕೆ ಹೋಲಿಸುತ್ತಾರೆ.
   ಇಷ್ಟೇ ಅಲ್ಲದೆ, ಇಲ್ಲಿ ಸಮಯದ ಮೌಲ್ಯವನ್ನು ತಿಳಿಸುವ ಹನಿಗಳಿವೆ. ತಾಯಿ,ತಂದೆ,ಕಂದ,ಗೆಳತಿ, ಹೀಗೆ ಮನುಷ್ಯ ಸಂಬಂಧಗಳಿವೆ. ಮೌನ ಮುನಿಸು, ಪ್ರೀತಿ,ದುಃಖ, ನೋವು,  ಮಮತೆ  ಮೊದಲಾದ ಭಾವಗಳ ಹರಿಯುವಿಕೆಯಿದೆ. ಜೀವನದ ಸುಖ ದುಃಖಗಳ ಅನಾವರಣವಿದೆ. ಭ್ರಷ್ಟಾಚಾರ, ನಿರುದ್ಯೋಗ ಮೊದಲಾದ ಸಮಾಜಿಕ ಸಮಸ್ಯೆಗಳಿಗೆ ಇಲ್ಲಿಯ ಬರಹಗಳು ಕನ್ನಡಿ ಹಿಡಿದಿವೆ. ರಾಜಕಾರಣಿ, ರೈತ , ವಿದ್ಯುತ್,  ಮೊದಲಾದ ವಿಷಯಗಳ ಪ್ರಸ್ತಾಪವಿದೆ. ಮಳೆ, ಕಡಲು, ಸೂರ್ಯ,ಚಂದ್ರ , ಮುಜಾವಿನ ಸೌಂದರ್ಯ, ಪ್ರಕೃತಿ   ಮುಂತಾದ ಸೃಷ್ಟಿಯ ಕುರಿತ ವಿಸ್ಮಯಗಳಿವೆ. ಆಧುನಿಕತೆಯ ಕೌತುಕಗಳಾದ ಮೊಬೈಲ್ ಗಣಕಯಂತ್ರಗಳ ವಿಷಯವಿದೆ. ಜ್ಜಾನವನ್ನು ಹೆಚ್ಚಿಸುವ ಪುಸ್ತಕಗಳು, ವಿದ್ಯಾಲಯಗಳು ಹೀಗೆ ಹಲವಾರು ವಿಷಯಗಳು ಇಲ್ಲಿನ ಕಾವ್ಯಕ್ಕೆ ವಸ್ತುವಾಗಿರುವುದನ್ನು ಕಾಣಬಹುದು.
     ಇವರೆಲ್ಲರ ಸಾಹಿತ್ಯ ಕೃಷಿ ಇನ್ನಷ್ಟು ಬೆಳೆಯಲಿ ಬೆಳಗಲಿ. ಮನದೊಳಗೆ ಭಾವಗಳು ಸದಾ ಉಸಿರಾಡುತ್ತಿರಲಿ, ಸಾರಸ್ವತ ಲೋಕಕ್ಕೆ ಇವರು ಇನ್ನಷ್ಟು ಕೊಡುಗೆಗಳನ್ನು ನೀಡುತ್ತಿರಲಿ.

                                                         ಬರಹ: ಚೇತನಾ ಕುಂಬ್ಳೆ
  Feedback: samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries