ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ದಶಕಗಳ ಹಳೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಕೇಸಿನಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅವಧಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಆಗಸ್ಟ್ 15ರವರೆಗೆ ವಿಸ್ತರಿಸಿದೆ.
ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶ ಎನ್ ಐ ಕಲಿಫುಲ್ಲಾ ನೇತೃತ್ವದ ಮೂವರು ಸದಸ್ಯರನ್ನೊಳಗೊಂಡ ಮಧ್ಯಸ್ಥಿಕೆ ತಂಡವನ್ನು ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸಾಧ್ಯವಾಗುತ್ತದೆಯೇ ಎಂದು ನೋಡಲು ರಚಿಸಲಾಗಿತ್ತು. ಅದು ನಿನ್ನೆ ಸುಪ್ರೀಂ ಕೋರ್ಟ್ ಗೆ ಮುಚ್ಚಿದ ಲಕೋಟೆಯಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸಮಯಾವಕಾಶ ಕೋರಿತ್ತು.
ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ವಿಚಾರಣೆಯಲ್ಲಿ ಏನು ಬೆಳವಣಿಗೆಗಳ ಆಗಿವೆ ಎಂದು ನಾವು ನಿಮ್ಮನ್ನು ಕೇಳುವುದಿಲ್ಲ, ಅದು ಗೌಪ್ಯ ವಿಷಯ ಎಂದು ಹೇಳಿ ಆಗಸ್ಟ್ 15ರವರೆಗೆ ವಿಸ್ತರಿಸಿದೆ.
ತಂಡದ ಮಧ್ಯಸ್ಥಿಕೆಗೆ ವಿಚಾರಣೆಗೊಪ್ಪಿಸಿ ಕಳೆದ ಮಾರ್ಚ್ 8ರಂದು ಸರ್ವೋಚ್ಛ ನ್ಯಾಯಾಲಯ ನೀಡಿದ್ದ ಆದೇಶದ ಬಳಿಕ ಇಂದು ಪ್ರಕರಣ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಯಿತು. ಮಧ್ಯಸ್ಥಿಕೆ ತಂಡದಲ್ಲಿ ಧಾರ್ಮಿಕ ಗುರು ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ ಗುರೂಜಿ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಸದಸ್ಯರಾಗಿದ್ದಾರೆ. ತಂಡಕ್ಕೆ ಸುಪ್ರೀಂ ಕೋರ್ಟ್ ಇನ್ ಕ್ಯಾಮರಾ ಪ್ರೊಸಿಡಿಂಗ್ ನಡೆಸಿ ಅದನ್ನು 2 ತಿಂಗಳೊಳಗೆ ಪೂರ್ಣಗೊಳಿಸುವಂತೆ ಹೇಳಲಾಗಿತ್ತು.
ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಬಗೆಹರಿಸಲು ಮಧ್ಯಸ್ಥಿಕೆಗೆ ವಹಿಸಲು ಯಾವುದೇ ಕಾನೂನು ಅಡಚಣೆಯಿಲ್ಲವೆಂದು ಸಾಂವಿಧಾನಿಕ ಪೀಠ ತೀರ್ಮಾನಕ್ಕೆ ಬಂದಿತ್ತು.