ತಿರುವನಂತಪುರಂ: ಶ್ರೀಲಂಕಾದಿಂದ 15 ಐಎಸ್ ಐಎಸ್ ಭಯೋತ್ಪಾದಕರು ಲಕ್ಷದ್ವೀಪದ ಮಿನಿಕಾಯ್ ದ್ವೀಪ ದತ್ತ ತೆರಳುತ್ತಿದ್ದಾರೆ ಎಂಬ ಬೇಹುಗಾರಿಕೆ ಸಂಸ್ಥೆಗಳ ವರದಿಗಳ ಹಿನ್ನೆಲೆಯಲ್ಲಿ ಕೇರಳ ಕರಾವಳಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಭಯೋತ್ಪಾದಕರು ಶ್ವೇತ ದೋಣಿಯಲ್ಲಿ ದ್ವೀಪದತ್ತ ಹೊರಟಿದ್ದು, ಅವರು ಕೇರಳ ಕರಾವಳಿ ಪ್ರವೇಶಿಸುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರು ಸೂಚಿಸಿದ್ದಾರೆ ಎಂದು ಮೂಲಗಳು ಶನಿವಾರ ಹೇಳಿವೆ.
ಬೇಹುಗಾರಿಕೆ ವರದಿಗಳ ಹಿನ್ನೆಲೆಯಲ್ಲಿ ತ್ರಿಶ್ಶೂರ್ ಹಾಗೂ ಕೋಜಿಕೋಡ್ ಕರಾವಳಿ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಹಾಗೂ ಪಹರೆ ತೀವ್ರಗೊಳಿಸಲಾಗಿದೆ. ಕರಾವಳಿ ಪ್ರದೇಶಗಳಲ್ಲಿನ ಅಸಹಜ ಚಟುವಟಿಕೆಗಳ ಮೇಲೆ ಕಣ್ಣಿಡುವಂತೆ ಮೀನುಗಾರರ ಸಮಿತಿಗಳಿಗೆ ಸೂಚನೆ ನೀಡಲಾಗಿದೆ.