ನವದೆಹಲಿ: ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾಪ ಪಡೆಯುವಲ್ಲಿ ವಿಫಲವಾಗಿರುವ ಬಿಜೆಪಿ ಹಿರಿಯ ನಾಯಕಿ ಹಾಗೂ ಎಂಟು ಬಾರಿ ಸಂಸದರಾಗಿರುವ ಮನೇಕಾ ಗಾಂಧಿ ಅವರು 17ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ.
62 ವರ್ಷದ ಮನೇಕಾ ಗಾಂಧಿ ಅವರು ಉತ್ತರ ಪ್ರದೇಶದ ಸುಲ್ತಾನಪುರ್ ದಿಂದ ಸಂಸತ್ ಗೆ ಆಯ್ಕೆಯಾಗಿದ್ದು, ಈ ಬಾರಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಮನೇಕಾ ಗಾಂಧಿ ಅವರು ಹಂಗಾಮಿ ಸ್ಪೀಕರ್ ಆಗಿ ನೂತನ ಸಂಸದರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
17ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 6ರಿಂದ ಆರಂಭವಾಗುವ 15ರ ವರೆಗೆ ನಡೆಯಲಿದೆ.
ಮನೇಕಾ ಗಾಂಧಿ ಅವರು ಮೊದಲ ಅಧಿವೇಶನ ಆರಂಭದಿಂದ ಸ್ಪೀಕರ್ ಆಯ್ಕೆಯಾಗುವವರೆಗೆ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಜೂನ್ 10ರಂದು ಸ್ಪೀಕರ್ ಆಯ್ಕೆ ನಡೆಯುವ ಸಾಧ್ಯತೆ ಇದ್ದು, ಜೂನ್ 11ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ.