ಕಾಸರಗೋಡು: ಪ್ಲಸ್‍ವನ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲಿರುವ ಸಮಯ ವ್ಯಾಪ್ತಿ ಕೊನೆಗೊಂಡಿರುವಂತೆಯೇ ಕಾಸರಗೋಡು ಜಿಲ್ಲೆಯಲ್ಲಿ 18,975 ಮಂದಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ 14,278 ಪ್ಲಸ್‍ವನ್ ಸೀಟುಗಳು ಮಾತ್ರವೇ ಲಭ್ಯ ಇದೆ. ಆದ್ದರಿಂದ ಅದಕ್ಕಿಂತಲೂ ಹೆಚ್ಚಾಗಿ 4697 ಅರ್ಜಿಗಳು ಸಲ್ಲಿಸಲ್ಪಟ್ಟಿವೆ.
ಇದೇ ವೇಳೆ ಇರುವ ಸೀಟುಗಳಿಗಿಂತಲೂ ಹೆಚ್ಚು ಅರ್ಜಿ ಲಭಿಸಿದರೂ ಅದರಿಂದ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲವೆಂದು ಹೈಯರ್ ಸೆಕೆಂಡರಿ ವಿಭಾಗದ ಅಧಿಕಾರಿಗಳು ಸಮಜಾಯಿಸಿ ನೀಡಿದ್ದಾರೆ. ಒಟ್ಟು ಲಭಿಸಿದ ಅರ್ಜಿಗಳ ಪೈಕಿ 16,694 ಅರ್ಜಿಗಳ ಪರಿಶೀಲನೆ ಈಗಾಗಲೇ ನಡೆದಿದೆ. ಜಿಲ್ಲೆಯಲ್ಲಿ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 16,694 ಮಂದಿ ಉತ್ತೀರ್ಣರಾಗಿದ್ದಾರೆ. ಇದರ ಹೊರತಾಗಿ ಸಿಬಿಎಸ್‍ಇಯಲ್ಲಿ 1676 ಮತ್ತು ಐಸಿಎಸ್‍ಇಯಲ್ಲಿ 99 ಮಂದಿ ಹಾಗೂ ಇತರ ವಿಭಾಗಗಳಲ್ಲಾಗಿ 506 ಮಂದಿ ಉತ್ತೀರ್ಣರಾಗಿದ್ದಾರೆ. ಇವರೆಲ್ಲರಿಗೂ ಮುಂದಿನ ಶಿಕ್ಷಣಕ್ಕೆ ಅವಕಾಶ ಲಭಿಸಬೇಕಾಗಿದೆ.
ಪ್ಲಸ್‍ವನ್ ಹೊರತಾಗಿ ಪಾಲಿಟೆಕ್ನಿಕ್, ವಿಎಚ್‍ಎಸ್‍ಇ ಮತ್ತು ಐಟಿಐ ಕೋರ್ಸ್‍ಗಳಿದ್ದು, ಅವುಗಳಿಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರವೇಶ ಲಭಿಸಲಿರುವ ಹಿನ್ನಲೆಯಲ್ಲಿ ಮುಂದಿನ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಕಾಸರಗೋಡು ಜಿಲ್ಲೆಯ ಹೊರತಾಗಿ ಇತರ ಜಿಲ್ಲೆಗಳ ವಿದ್ಯಾರ್ಥಿಗಳೂ ಪ್ಲಸ್‍ವನ್ ಪ್ರವೇಶಕ್ಕಾಗಿ ಈ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ್ದು, ಅದು ಜಿಲ್ಲೆಯಲ್ಲಿ ಸಲ್ಲಿಸಲ್ಪಟ್ಟ ಅರ್ಜಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಮೆರಿಟ್, ನೋನ್ ಮೆರಿಟ್, ಕ್ರೀಡಾ ಕೋಟಾ ವಿಭಾಗಗಳಲ್ಲಿ ವಿಜ್ಞಾನ ವಿಷಯದಲ್ಲಿ 5,739, ಕಲಾ ವಿಭಾಗ(ಹ್ಯುಮಾನಿಟೀಸ್) - 3,700 ಮತ್ತು ವಾಣಿಜ್ಯ ಶಾಸ್ತ್ರ(ಕಾಮರ್ಸ್) 4839 ಸೀಟುಗಳಿವೆ. ಈ ಮೂರು ವಿಷಯಗಳಲ್ಲಾಗಿ ಒಟ್ಟಾರೆ ಸೀಟುಗಳಲ್ಲಿ 10,685 ಸೀಟುಗಳು ಮೆರಿಟ್ ಸೀಟುಗಳಾಗಿವೆ. ಇದರಲ್ಲಿ ವಿಜ್ಞಾನ ವಿಭಾಗದಲ್ಲಿ 4099, ಕಲಾ ವಿಭಾಗದಲ್ಲಿ 3,074 ಮತ್ತು ವಾಣಿಜ್ಯ 3,512 ಮೆರಿಟ್ ಸೀಟುಗಳು ಒಳಗೊಂಡಿವೆ. ಮೆರಿಟ್ ಸೀಟುಗಳ ಪೈಕಿ 8,366 ಸೀಟುಗಳು ಸರಕಾರಿ ಮತ್ತು 2,319 ಅನುದಾನಿತ ಶಾಲೆಗಳಿವೆ. ಕ್ರೀಡಾ ಕೋಟಾವಾಗಿ 265 ಸೀಟುಗಳನ್ನು ನಿಗದಿಪಡಿಸಲಾಗಿದೆ.
ನೋನ್ ಮೆರಿಟ್ ವಿಭಾಗದಲ್ಲಿ 940 ಮೆನೇಜ್‍ಮೆಂಟ್ ಸೀಟುಗಳು, ಕಮ್ಯೂನಿಟಿ ಕೋಟಾದಲ್ಲಿ 310 ಅನುದಾನಿತ ವಲಯದ 2,078 ಸೀಟುಗಳು ಒಳಗೊಂಡಿವೆ.
ಜಿಲ್ಲೆಯಲ್ಲಿ ಒಟ್ಟು 106 ಪ್ಲಸ್‍ಟು ಶಾಲೆಗಳಿವೆ. ಅದರಲ್ಲಿ 64 ಸರಕಾರಿ, 24 ಅನುದಾನಿತ, 16 ಅನುದಾನ ರಹಿತ, ಒಂದು ಸ್ಪೆಷಲ್ ಸ್ಕೂಲ್ ಮತ್ತು ಒಂದು ರೆಸಿಡೆನ್ಸಿಯಲ್ ಸ್ಕೂಲ್ ಒಳಗೊಂಡಿದೆ. ವಿಜ್ಞಾನ ವಿಭಾಗದಲ್ಲಿ 114, ಕಲಾ ವಿಭಾಗದಲ್ಲಿ 97 ಬ್ಯಾಚ್‍ಗಳಿವೆ. ಹೀಗೆ ಒಟ್ಟು ಮೂರು ವಿಭಾಗಗಳಲ್ಲಿ 285 ಬ್ಯಾಚ್‍ಗಳಿವೆ. 171 ಬ್ಯಾಚ್‍ಗಳು ಸರಕಾರಿ ಶಾಲೆಗಳಲ್ಲಿದ್ದು,ವಿಜ್ಞಾನ ವಿಭಾಗದಲ್ಲಿ 58, ಕಲಾ ವಿಭಾಗದಲಲಿ 53 ಮತ್ತು ವಾಣಿಜ್ಯ ವಿಭಾಗದಲ್ಲಿ 60 ತಂಡಗಳಿವೆ. ಅನುದಾನಿತ ಶಾಲೆಗಳಲ್ಲಿ 73 ಮತ್ತು ಅನುದಾನ ರಹಿತ ಶಾಲೆಗಳಲ್ಲಿ 41 ತಂಡಗಳಿವೆ ಎಂದು ಹೈಯರ್ ಸೆಕೆಂಡರಿ ವಿಭಾಗವು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.