ನವದೆಹಲಿ: ದೆಹಲಿಯಲ್ಲಿ 1984ರಲ್ಲಿ ನಡೆದ ಸಿಖ್ ವಿರೋಧಿ ಗಲಭೆ ವೇಳೆ ಸಿಖ್ ರನ್ನು ಸಾಯಿಸುವಂತೆ ಪ್ರಧಾನ ಮಂತ್ರಿಗಳ ಕಚೇರಿಯೇ ನೇರವಾಗಿ ನಿರ್ದೇಶನ ನೀಡಿತ್ತು ಎಂದು ಹಿರಿಯ ವಕೀಲ ಹಾಗೂ ಸಿಖ್ ವಿರೋಧಿ ಗಲಭೆ ಸಂತ್ರಸ್ತರ ಪರವಾಗಿ ಸುಪ್ರೀಂ ಕೋರ್ಟ್‍ನಲ್ಲಿ ವಾದಿಸುತ್ತಿರುವ ಎಚ್ ಎಸ್ ಫೂಲ್ಕಾ ಅವರು ಆರೋಪಿಸಿದ್ದಾರೆ.
1984ರಲ್ಲಿ ಪ್ರಧಾನಿ ಕಚೇರಿಯ ಸೂಚನೆಯಂತೆ ಹಲವು ಸಿಖ್ ರನ್ನು ಹತ್ಯೆ ಮಾಡಿದ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಇವೆ. ಆ ಸಾಕ್ಷ್ಯಗಳನ್ನು ನಾವು ನಾನಾವತಿ ಆಯೋಗ ಮತ್ತು ಮಿಶ್ರಾ ಆಯೋಗಕ್ಕೆ ನೀಡಿದ್ದೇವೆ ಎಂದು ಫೂಲ್ಕಾ ಸುದ್ದಿಸಂಸ್ಥೆ ಎಎಐಗೆ ತಿಳಿಸಿದ್ದಾರೆ.
ಸಿಖ್ ಗಲಭೆ ವೇಳೆ ಸೇನೆಯನ್ನು ಹಿಂಪಡೆದಿರಲಿಲ್ಲ. ಹೀಗಾಗಿ ಅಂದು ಗೃಹ ಸಚಿವ ನರಸಿಂಹ ರಾವ್ ಅವರ ಮನೆಗೆ ತೆರಳಿ, ಸೇನೆ ಅಮಾಯಕ ಜನರನ್ನು ಹತ್ಯೆ ಮಾಡುತ್ತಿದ್ದು, ಕೂಡಲೇ ಸೇನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದೆ. ಇದಕ್ಕೆ ಅವರು ಒಪ್ಪಿದ್ದರು ಎಂದು ಫೂಲ್ಕಾ ವಿವರಿಸಿದ್ದಾರೆ.
ಅಂದು ರಾಷ್ಟ್ರಪತಿಗಳು, ಕೇಂದ್ರ ಕಾನೂನು ಸಚಿವರಾಗಿದ್ದ ಶಾಂತಿ ಭೂಷಣ್ ಹಾಗೂ ಗೃಹ ಸಚಿವ ನರಸಿಂಹ ರಾವ್ ಅವರು ಸೇನೆ ಹಿಂಪಡೆಯಲು ಬಯಸಿದ್ದರು. ಆದರೆ ಪ್ರಧಾನಿ ಕಚೇರಿ ಮಾತ್ರ ಇದಕ್ಕೆ ಒಪ್ಪಲಿಲ್ಲ. ಈ ಕುರಿತು ನಾವು ಆಯೋಗಕ್ಕೆ ಸಾಕ್ಷ್ಯಗಳನ್ನು ನೀಡಿದ್ದೇವೆ ಎಂದರು.