ಬದಿಯಡ್ಕ: ಪ್ರಾದೇಶಿಕ ಭಾಷೆಗಳು ಸಾಂಸ್ಕøತಿಕ ಬೇರಿನ ತಾಯಿಬೇರಾಗಿದ್ದು, ಕೆಡುಕಾಗದಂತೆ ಸಂರಕ್ಷಿಸುವ ಹೊಣೆ ಪ್ರತಿಯೊಬ್ಬ ಸಂಸ್ಕøತಿ ಪ್ರೇಮಿಯ ಕರ್ತವ್ಯವಾಗಿದೆ. ಮಾತೃಭಾಷೆಯಲ್ಲಿ ಲಭ್ಯವಾಗುವ ಶಿಕ್ಷಣ, ಅರಿವುಗಳು ಸುಲಲಿತವಾಗಿ ಶಾಶ್ವತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಮಹಾಸಾಗದ ಪ್ರತಿಯೊಂದು ಉಪನದಿಗಳಂತಿರುವ ಪ್ರಾದೇಶಿಕ ಭಾಷೆ, ಸಂಸ್ಕøತಿ, ಸೊಗಡುಗಳ ಪರಂಪರೆಯನ್ನು ಬೆಳೆಸುವಲ್ಲಿ ವೈವಿಧ್ಯಮಯ ಕಾರ್ಯಯೋಜನೆಗಳು ಪೂರಕವಾಗಿರುತ್ತದೆ ಎಂದು ಕರ್ನಾಟಕ ಸರಕಾರದ ಅರೆಭಾಷೆ ಸಾಹಿತ್ಯ ಸಂಸ್ಕøತಿ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ ಗೌಡ ಅವರು ತಿಳಿಸಿದರು.
ನೀರ್ಚಾಲು ಸಮೀಪದ ಕೊಲ್ಲಂಗಾನದ ಅನಂತಶ್ರೀಯ 2ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ, ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಮತ್ತು ಅನಂತಶ್ರೀ ಟ್ರಸ್ಟ್ ಕೊಲ್ಲಂಗಾನದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಚಂದ್ರೋದಯದಿಂದ ಭಾನುವಾರ ಸೂರ್ಯೋದಯದ ವರೆಗೆ ವಿಶಿಷ್ಟವಾಗಿ ಆಯೋಜಿಸಲಾದ "ಗಡಿನಾಡ ಬೆಳದಿಂಗಳ ಬೆಳಕು" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ತನ್ನದೇ ವಿಶಿಷ್ಟತೆಯ ಮೂಲಕ ಜನಜನಿತವಾಗಿರುವ ಅರೆಭಾಷೆಯನ್ನು ಕರ್ನಾಟಕದ ಶಾಲಾ ಪಠ್ಯದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ಕಾರ್ಯನಿರತವಾಗಿದೆ. ಶೀಘ್ರ ಇಂತಹ ಸುಯೋಗ ಪ್ರಾಪ್ತವಾಗಲಿದೆ ಎಂದು ತಿಳಿಸಿದ ಅವರು, ವೈವಿಧ್ಯಮಯ ಇತರ ಭಾಷೆ, ಸಂಸ್ಕøತಿಗಳನ್ನು ತಿಳಿಯುವ, ಅಧ್ಯಯನ ಮಾಡುವ ಸೌಕರ್ಯಗಳು ವಿಸ್ತರಿಸಲ್ಪಡಬೇಕು ಎಂದು ತಿಳಿಸಿದರು.
ಶಾರದಾ ಅನಂತಪದ್ಮನಾಭ ಉಪಾಧ್ಯಾಯ ಅವರು ದೀಪ ಪ್ರಜ್ವಲನೆಗೈದು ಚಾಲನೆ ನೀಡಿದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರು, ಭಾಷಾ ಸಮೃದ್ದತೆಯ ಸಂವರ್ಧನೆಗೆ ಕಾರಣರಾಗುವ ಕವಿಗಳು ಬ್ರಹ್ಮ ಸೃಷ್ಟಿಗಿಂತಲೂ ವಿಶೇಷ ಪರಿಣಾಮಕಾರಿಯಾದುದಾಗಿದೆ. ಲೌಕಿಕ, ಪಾರಲೌಕಿಕಗಳನ್ನು, ಭೂತ, ವರ್ತಮಾನ, ಭವಿಷ್ಯತ್ತುಗಳನ್ನು ಅರ್ಥೈಸುವ ಮೂಲಕ ತಮ್ಮ ಭಾವನಾ ಸಾಗರದಲ್ಲಿ ಹೃದಯವಂತಿಕೆಯ ಚೈತನ್ಯ ತುಂಬುವ ಕವಿಗಳು ಅಂಧಕಾರದಿಂದ ಬೆಳಕಿನತ್ತ ಕೊಂಡೊಯ್ಯುವ ಶಕ್ತಿ ವಾಹಕರು ಎಂದು ಅವರು ತಿಳಿಸಿದರು. ಜ್ಞಾನ ದೀಪದ ಮೂಲವಾದ ಭಾಷೆಯ ಸಮೃದ್ದತೆ, ಸದಾಶಯ ವಿನಿಮಯಗಳ ಮೂಲಕ ಸಾಮಾಜಿಕ ಕಟಿಬದ್ದತೆಯ ಬರಹಗಾರ ಕಾಲಘಟ್ಟದ ನಿರ್ಣಾಯಕನಾಗಿರುತ್ತಾನೆ ಎಂದು ಅವರು ವಿಶ್ಲೇಶಿಸಿದರು. ಸಾಂಸ್ಕøತಿಕೋತ್ಸವಗಳು ಹಲವು ರಸ, ಭಾವಗಳ ಸಂಗಮವಾಗಿ ಸಾಗರೋಪಾದಿಯಲ್ಲಿ ಋಣಾತ್ಮಕತೆಯನ್ನು ಹೊರಗೆಸೆದು ಧನಾತ್ಮಕ ಶಕ್ತಿ ಸಂಚಯನಕ್ಕೆ ಕಾರಣವಾಗುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಕಲಾ ಪ್ರದರ್ಶನಗಳು, ಸಾಂಸ್ಕøತಿಕ ಉತ್ಸವಗಳು ಹಳಿಯಿಂದ ಹೊರಗಿಳಿಯದೆ ಮೂಲ ಸೊಗಡುಗಳೊಂದಿಗೆ ಪ್ರದರ್ಶನಗೊಳ್ಳುವ ಮಹತ್ವವನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದು ಎಚ್ಚರಿಸಿದ ಅವರು, ಸಾಂಸ್ಕøತಿಕ ಕಲೆಗಳು ಮಾನವ ಜೀವನದ ಮೌಲ್ಯಗಳನ್ನು ಎತ್ತಿಹಿಡಿಯಬೇಕೇ ಹೊರತು ಮಾನವೀಯ ಮೌಲ್ಯಗಳನ್ನು ದೀವಾಳಿಗೊಳಿಸುವ ದುಸ್ಸಾಹಸ ಸಹ್ಯವಲ್ಲ ಎಂದರು. ಗಡಿನಾಡು ಕಾಸರಗೋಡಿನ ಬಹುರೂಪೀ ಸಾಂಸ್ಕøತಿಕ, ಸಾಮಾಜಿಕ, ಸಾಹಿತ್ತಿಕ ವೈವಿಧ್ಯಗಳನ್ನು ಕಾಪಿಡುವಲ್ಲಿ ನಿತ್ಯ ನಿರಂತರವಾಗಿ ಆಯೋಜಿಸಲ್ಪಡುವ ಕಾರ್ಯಯೋಜನೆಗಳು ಯಶಪಡೆದಿದ್ದು, ಇನ್ನಷ್ಟು ಸಾಧಿಸುವ ಛಾತಿ ಮೂಡಿಬರಲಿ ಎಂದು ಕರೆನೀಡಿದರು.
ಕ.ಸಾ.ಪ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಗಡಿನಾಡಿನ ಕನ್ನಡ ಸೊಗಡನ್ನು ಕಾಪಿಡುವಲ್ಲಿ ಯುವ ತಲೆಮಾರು ಸಂಯೋಜಿಸುವ ಬಹುಮುಖಿ ಚಿಂತನೆಗಳು ಮಾದರಿಯಾದುದು. ಅಂತರಂಗದ ಶುದ್ದತೆಯೊಂದಿಗೆ ಭಿನ್ನತೆಗಳಿಲ್ಲದೆ ವಿಸ್ತರಿಸಲ್ಪಡಲಿ ಎಂದು ಹಾರೈಸಿದರು.
ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ, ಪಾಡಿ ಅರಮನೆಯ ಜಯಸಿಂಹ ವರ್ಮ ರಾಜ, ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಾಮಪ್ರಸಾದ್ ಮಾನ್ಯ, ಸಂಸ್ಕøತ ವಿದ್ವಾಂಸ ಅನಂತ ಗಣಪತಿ ಎಸ್, ಪುತ್ತೂರಿನ ಸತ್ಯಶಾಂತಾ ಪ್ರತಿಷ್ಠಾನದ ಶಾಂತಾ ರವಿ ಕುಂಟಿನಿ, ಖ್ಯಾತ ಜ್ಯೋತಿಷಿ, ಸಾಹಿತಿ ಸುಕುಮಾರ ಆಲಂಪಾಡಿ, ಕೇರಳ ಬ್ಯಾರಿ ಅಕಾಡೆಮಿ ಕಾರ್ಯದರ್ಶಿ ಝಡ್.ಎ.ಕಯ್ಯಾರ್, ಅಂತರಾಷ್ಟ್ರೀಯ ಚಿತ್ರಕಲಾವಿದ ಪಿ.ಎಸ್.ಪುಣಿಚಿತ್ತಾಯ, ನ್ಯಾಯವಾದಿ ಅಡೂರು ಉಮೇಶ್ ನಾೈಕ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ, ಎ.ಆರ್.ಸುಬ್ಬಯ್ಯಕಟ್ಟೆ, ಶಶಿರೇಖಾ ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು.
ಪ್ರೊ.ಎ.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ವಂದಿಸಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಖಜಾಂಜಿ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ದಾಸ ಸಂಕೀರ್ತನೆ, ಅಂತರಾಷ್ಟ್ರೀಯ ಯೋಗಪಟು ತೇಜಕುಮಾರಿ ಮತ್ತು ಬಳಗ ಕಾಸರಗೋಡು ಅವರಿಂದ ಯೋಗ ಪ್ರದರ್ಶನ, ವಿದುಷಿಃ ಅಯನಾ ಪೆರ್ಲ ಅವರಿಂದ ಭರತನಾಟ್ಯ ನೃತ್ಯ ಪ್ರದರ್ಶನ, ವಸಂತ ಬಾರಡ್ಕ ಹಾಗೂ ಮುರಳಿ ನೀರ್ಚಾಲು ಅವರಿಂದ ಭಾವಗೀತೆ, ಚಿತ್ರಗೀತೆಗಳ ಗಾಯನ, ಸಮನ್ವಿತಾ ಗಣೇಶ್ ಅಣಂಗೂರು ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಆ ಬಳಿಕ ಭಾನುವಾರ ಸೂರ್ಯೋದಯದ ವರೆಗೆ 54ಕ್ಕಿಂತಲೂ ಮಿಕ್ಕಿದ ಕವಿಗಳಿಂದ ಬಹುಭಾಷಾ ಕವಿಗೋಷ್ಠಿ ನಡೆಯಿತು.