HEALTH TIPS

ಕೊಲ್ಲಂಗಾನ ಮೇಳದ 21ನೇ ವರ್ಷದ ತಿರುಗಾಟ ಮುಕ್ತಾಯ-ಯಕ್ಷಗಾನದ ದೈವಿಕ ಮಹತ್ವ ಮಣ್ಣಿನ ಸತ್ವದ ಸಂಕೇತ-ತಂತ್ರಿ ಗಣಾಧಿರಾಜ ಉಪಾಧ್ಯಾಯ

       
       ಬದಿಯಡ್ಕ: ಸಾಂಸ್ಕøತಿಕ, ಸಾಮಾಜಿಕ ಕ್ರಾಂತಿಯೊಂದಿಗೆ ದೈವಿಕ ಆರಾಧನಾ ಕಲೆಯಾಗಿ ಬೆಳೆದುಬಂದು ಇಂದು ವಿಶ್ವವಿಖ್ಯಾತವಾಗಿರುವ ಯಕ್ಷಗಾನ ಹೊರ ನೋಟಕ್ಕೆ ಅತಿ ಶ್ರೀಮಂತವೆನಿಸಿ ಕಾಣಿಸುತ್ತಿದ್ದರೂ, ಆಂತರಿಕವಾಗಿ ಹಲವು ಸ್ಥಿತ್ಯಂತರಗಳ ಸವಾಲುಗಳನ್ನು ಎದುರಿಸುತ್ತಿದೆ. ಸಾಂಪ್ರದಾಯಿಕ ಬದ್ದತೆಗಳೊಂದಿಗೆ ವರ್ತಮಾನದ ವಿದ್ಯಮಾನಗಳಿಗೂ ಸಹಸ್ಪಂದಿಸಿ ಜನಮನ್ನಣೆಗೆ ಪಾತ್ರವಾಗಿರುವ ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಪರಂಪರೆಗೆ ಧಕ್ಕೆಯಾಗದಂತೆ ಮೂಲ ಸ್ವರೂಪದಲ್ಲಿ ಮುನ್ನಡೆಸುವ ಹೊಣೆಯ ಅರಿವು ನಮ್ಮಲ್ಲಿರಬೇಕು ಎಂದು ಕೊಲ್ಲಂಗಾನ ಶ್ರೀನಿಲಯದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಅವರು ತಿಳಿಸಿದರು.
   ಕೊಲ್ಲಂಗಾನ ಶ್ರೀನಿಲಯದ ಸನ್ನಿಧಿಯಲ್ಲಿ ಶುಕ್ರವಾರ ರಾತ್ರಿ ನಡೆದ ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಕೃಪಾಪೋಶಿತ ಯಕ್ಷಗಾನ ಕಲಾಮಂಡಳಿಯು ಪ್ರಸ್ತುತ ವರ್ಷ ಮುನ್ನಡೆಸಿದ ತನ್ನ ಯಶಸ್ವೀ 21ನೇ ವರ್ಷದ ತಿರುಗಾಟದ ಗೆಜ್ಜೆಬಿಜ್ಜುವ ಪತ್ತನಾಜೆ(ಹತ್ತಾವದಿ) ಸೇವಾ ರೂಪದ ಯಕ್ಷಗಾನ  ಪ್ರದರ್ಶನದ ಅಂಗವಾಗಿ ಆಯೋಜಿಸಿದ ಸಮಾರೋಪ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತರಿದ್ದು ಅನುಗ್ರಹ ಭಾಷಣಗೈದು ಅವರು ಮಾತನಾಡಿದರು.
    ವಿಶಿಷ್ಟ ಕಲಾಪ್ರಕಾರವಾದ ಯಕ್ಷಗಾನಕ್ಕೆ ದೈವಿಕ ಮಹತ್ವ ಈ ಮಣ್ಣಿನ ಸತ್ವದೊಂದಿಗೆ ಅಡಕವಾಗಿ ಬಂದಿದೆ. ಅನಂತ ಜ್ಞಾನಕಾಶಿಯ ನಮ್ಮ ಪರಂಪರೆಯ ಮಹತ್ವವನ್ನು ಜನಸಾಮಾನ್ಯರಿಗೆ ಗ್ರಹಿಸುವಲ್ಲಿ ಯಕ್ಷಗಾನ ಕಥಾನಕಗಳು ಉಂಟುಮಾಡಿರುವ ಮೈಲುಗಲ್ಲು ಇಲ್ಲಿಯ ಅಚ್ಚಳಿಯದ ದಾಖಲೆಯಾಗಿದೆ ಎಂದು ತಿಳಿಸಿದರು. ಸಂಸ್ಕøತಿ, ಕಲೆ ಮತ್ತು ಜನಜೀವನ ಪರಸ್ಪರ ಜೊತೆಯಾಗಿ ಸಾಗಿದಾಗ ಅಂತಹ ಸಮಾಜ ಕ್ಲೇಶ ರಹಿತವಾಗಿ ಮುನ್ನಡೆಯಲು ಸಾಧ್ಯವಾಗಿದೆ. ನಮ್ಮ ಹೊಸ ತಲೆಮಾರಿಗೆ ಈ ಬಗೆಗಿನ ತಿಳುವಳಿಕೆಯನ್ನು ದಾಟಿಸುವಲ್ಲಿ ಹಿರಿಯರು ಮುತುವರ್ಜಿ ವಹಿಸಿ ಯಕ್ಷಗಾನ ಪ್ರದರ್ಶನಗಳ ಉತ್ತಮ ವೀಕ್ಷಕರಾಗುವ ಅವಕಾಶವನ್ನು ಮಾಡಿಕೊಡಬೇಕು ಎಂದು ಅವರು ತಿಳಿಸಿದರು. ಕೊಲ್ಲಂಗಾನ ಮೇಳ ಯಶಸ್ವಿಯಾಗಿ ಕಳೆದ 21 ವರ್ಷಗಳಿಂದ ನಡೆಸುತ್ತಿರುವ ಸಾಂಸ್ಕøತಿಕ ಕ್ರಾಂತಿ ಇತರೆಡೆಗಳಿಗೂ ಮಾದರಿಯಾಗಿದೆ ಎಂದು ಅವರು ತಿಳಿಸಿದರು.
    ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಯಕ್ಷಗಾನ ಕಲಾವಿದ, ಸಂಘಟಕ ಗುಂಡ್ಯಡ್ಕ ಈಶ್ವರ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಕಲಾವಿದರು, ಕಲಾಪ್ರದರ್ಶನಗಳಲ್ಲಿ ಅತ್ಯಂತ ಗುಣಾತ್ಮಕತೆಗಳಿಂದ ಪ್ರಸಿದ್ದಿಯಾಗಿರುವ ಶ್ರೀಕ್ಷೇತ್ರ ಕೊಲ್ಲಂಗಾನ ಮೇಳದ ಪ್ರದರ್ಶನಗಳು ಜನಮನ್ನಣೆಯೊಂದಿಗೆ ಗಮನಾರ್ಹ ಸಾಂಸ್ಕøತಿಕ ಮೇರುತ್ವವನ್ನು ಕೊಡಮಾಡುತ್ತಿದೆ. ಸಹೃದಯ ಕಲಾಪೋಷಕರ, ಕಲಾಭಿಮಾನಿಗಳ ನಿರಂತರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿರುವುದು ಸಜನರ ಸಹೃದಯತೆಯ ಸಂಕೇತ ಎಂದು ತಿಳಿಸಿದರು.
    ಉದ್ಯಮಿ ನವೀನ್ ಕುಮಾರ್ ಚಿದಂಬರಂ, ಪ್ರೊ.ಎ.ಶ್ರೀನಾಥ್ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಪ್ರಾಸ್ತಾವಿಕವಾಗಿ ಮಾನನಾಡಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶರಣ್ಯ ಶ್ರೀನಿವಾಸ ಭಟ್ ವಂದಿಸಿದರು. ಮೇಳದ ಪ್ರಬಂಧಕ ಮಹೇಶ್, ಭಾಗವತ ಸತೀಶ್ ಪುಣಿಚಿತ್ತಾಯ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಬೆಳಿಗ್ಗಿನ ವರೆಗೆ ಸೇವಾ ಬಯಲಾಟ ಪ್ರದರ್ಶನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries