ನವದೆಹಲಿ: ಬಿಜೆಪಿ ನೇತೃತ್ವದ ಎನ್‍ಡಿಎಗೆ ಸ್ಪಷ್ಟ ಬಹುಮತ ದೊರೆಯುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ ನಂತರ ಇವಿಎಂ ಬಗೆಗಿನ ಪ್ರತಿಪಕ್ಷಗಳ ಸಂಶಯ ಮತ್ತಷ್ಟು ಹೆಚ್ಚಾಗಿದ್ದು, ಮಂಗಳವಾರ ಮತ್ತೆ ಚುನಾವಣಾ ಆಯೋಗದ ಕದ ತಟ್ಟಿವೆ.
ನಿನ್ನೆ ದೆಹಲಿಯಲ್ಲಿ ಸಭೆ ಸೇರಿದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಆಮ್? ಆದ್ಮಿ, ಸಿಪಿಐ-ಸಿಪಿಐಎಂ, ಡಿಎಂಕೆ, ಎನ್ ಸಿಪಿ ಸೇರಿದಂತೆ 22 ಪ್ರತಿಪಕ್ಷಗಳ ನಾಯಕರು, ಶೇ.50ರಷ್ಟು ವಿವಿಪ್ಯಾಟ್ ಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಭೆ ಬಳಿಕ ಚುನಾವಣಾ ಆಯೋಗ ತೆರಳಿದ ಪ್ರತಿಪಕ್ಷಗಳ ನಾಯಕರು, ಮತ ಎಣಿಕೆಗೂ ಮುನ್ನ ವಿವಿಪ್ಯಾಟ್‍ಗಳ ಪರಿಶೀಲನೆ ನಡೆಸಬೇಕು ಎಂದು ಮನವಿ ಸಲ್ಲಿಸಿವೆ.
ವಿವಿಪ್ಯಾಟ್ ಪರಿಶೀಲನೆ ವೇಳೆ ಲೋಪದೋಷಗಳು ಕಂಡುಬಂದಲ್ಲಿ, ಪ್ರತಿ ವಿಧಾನಸಭೆ ಕ್ಷೇತ್ರದ ಎಲ್ಲ ಮತ ಗಟ್ಟೆಗಳ ಶೇ.100 ರಷ್ಟು ವಿವಿಪ್ಯಾಟ್‍ಗಳನ್ನು ಪರಿಶೀಲಿಸಿ ನಂತರ ಅವುಗಳನ್ನು ವಿದ್ಯುನ್ಮಾನ ಮತಯಂತ್ರದ ಜತೆ ತುಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಮತ ಎಣಿಗೂ ಮುನ್ನ ವಿವಿಪ್ಯಾಟ್ ಪರಿಶೀಲಿಸಬೇಕು ಎಂದು ನಾವು ಆಯೋಗ ಮನವಿ ಮಾಡಿದ್ದೇವೆ ಎಂದರು.
ವಿವಿಪ್ಯಾಟ್ ಗಳನ್ನು ಮೊದಲು ಪರಿಶೀಲಿಸಬೇಕು ಎಂದು ನಾವು ಹಲವು ತಿಂಗಳಿಂದ ಒತ್ತಾಯಿಸುತ್ತಿದ್ದೇವೆ. ಈ ಕುರಿತು ನಾಳೆ ಸಭೆ ನಡೆಸುವುದಾಗಿ ಆಯೋಗದ ಅಧಿಕಾರಿಗಳು ತಿಳಿಸಿರುವುದಾಗಿ ಮತ್ತೊಬ್ಬ ಕಾಂಗ್ರೆಸ್ ನಾಯಕ ಅಭಿಶೇಕ್ ಸಿಂಘ್ವಿ ಅವರು ಹೇಳಿದ್ದಾರೆ.
ಜನಾದೇಶವನ್ನು ಗೌರವಿಸುವಂತೆ ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ. ಯಾವುದೇ ಕಾರಣಕ್ಕೂ ಜನಾದೇಶವನ್ನು ತಿರುಚಬಾರದು ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ.