ಕಾಸರಗೋಡು: 17ನೇ ಲೋಕಸಭೆ ಚುನಾವಣೆಯ ಕಾಸರಗೋಡು ಲೋಕಸಭೆ ಕ್ಷೇತ್ರದ ಮತಗಣನೆಗೆ ನಿಯುಕ್ತರಾದ ಸಿಬ್ಬಂದಿಯ ದ್ವಿತೀಯ ಹಂತದ ರಾಂಡಮೈಸೇಷನ್ ಜರುಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಅವರ ಜಿಲ್ಲಾಧಿಕಾರಿ ಕೊಠಡಿಯಲ್ಲಿ ಸೋಮವಾರ ಈ ಪ್ರಕ್ರಿಯೆ ಜರುಗಿತು.
ಪ್ರತಿ ಸಿಬ್ಬಂದಿಯೂ ಯಾವ ವಿಧಾನಸಭೆ ಕ್ಷೇತ್ರದಲ್ಲಿ ಮತಗಣನೆ ನಡೆಸಲಿದ್ದಾರೆ ಎಂಬುದನ್ನು ನಿಗದಿಪಡಿಸಲಾಯಿತು. ಮೇ 23ರಂದು ಪಡನ್ನಕ್ಕಾಡ್ ನೆಹರೂ ಆಟ್ರ್ಸ್ ಆಂಡ್ ಸಯನ್ಸ್ ಕಾಲೇಜಿನಲ್ಲಿ ಮತಗಣನೆ ನಡೆಯಲಿದ್ದು, ಅಂದು ಬೆಳಗ್ಗೆ 5 ಗಂಟೆಗೆ ತೃತೀಯ ಹಂತದ ರಾಂಡಮೈಸೇಷನ್ ನಡೆಯಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಈ ಕೊನೆಯ ಹಂತದ ರಾಂಡಮೈಸೇಷನ್ ನಲ್ಲಿ ಯಾವ ಸಿಬ್ಬಂದಿ ಯಾವ ವಿಧಾನಸಭೆ ಕ್ಷೇತ್ರದ ಯಾವ ಟೇಬಲ್ ನಲ್ಲಿ ಗಣನೆಗಾಗಿ ಕೂರಬೇಕು ಎಂಬುದನ್ನು ನಿಗದಿಪಡಿಸಲಾಗುವುದು.
ಸಭೆಯಲ್ಲಿ ಲೋಕಸಭೆ ಕ್ಷೇತ್ರ ಮಟ್ಟದ ನಿರೀಕ್ಷಕ ಎಸ್.ಗಣೇಶ್, ಚುನಾವಣೆ ವಿಭಾಗ ಸಿಬ್ಬಂದಿ, ಇತರ ಸಿಬ್ಬಂದಿ, ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಹಕೀಂ ಕುನ್ನಿಲ್, ಎಂ.ವಿ.ಬಾಲಕೃಷ್ಣನ್ ಮಾಸ್ತರ್, ವಿನೋದ್ ಕುಮಾರ್ ಪಿ.ವಿ., ಸದಾನಂದ ರೈ ಮೊದಲಾದವರು ಉಪಸ್ಥಿತರಿದ್ದರು.