ಮುಳ್ಳೇರಿಯ: ಸ್ಥಳೀಯ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘದ 24ನೇ ವಾರ್ಷಿಕೋತ್ಸವವು ಇತ್ತೀಚೆಗೆ ದೇಲಂಪಾಡಿ ಶ್ರೀಉಮಾಮಹೇಶ್ವರ ಶಾಸ್ತಾರ ಕ್ಷೇತ್ರದ ಜಾತ್ರೋತ್ಸವದ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ, ಯಕ್ಷಗಾನ ಕಲಾವಿದ ಅಮ್ಮಂಕಲ್ಲು ಸೀತಾರಾಮ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಳ್ಳೇರಿಯದ ಹಿರಿಯ ನಾಗರಿಕ ವೇದಿಕೆಯ ಕೆ.ಎಂ.ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ, ಸ್ಥಳೀಯ ಸಂಘಟನೆಗಳು ಹಿರಿಯ ವ್ಯಕ್ತಿತ್ವಗಳನ್ನು ಗುರುತಿಸಿ ಅಭಿನಂದಿಸುವ ಚಟುವಟಿಕೆಯ ಮೂಲಕ ಯುವ ಸಮಾಜಕ್ಕೆ ಮಾದರಿಯಾಗುತ್ತಿದೆ. ಹಿರಿಯರ ಅನುಭವಗಳನ್ನು ತಿಳಿದು ಅವರ ಮಾರ್ಗದರ್ಶನದೊಂದಿಗೆ ಮುನ್ನಡೆಯುವ ಛಲ ಯಶಸ್ವಿ ಬದುಕಿನತ್ತ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.
ಶ್ರೀಕ್ಷೇತ್ರದ ಪ್ರಮುಖರಾದ ಸುರೇಶ್ ಅರಳಿತ್ತಾಯ, ಸಂಘದ ಅಧ್ಯಕ್ಷ ಜಯಂತ ಕಾರ್ಲೆ ಉಪಸ್ಥಿತರಿದ್ದು ಶುಭಹಾರೈಸಿದರು. ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ಸುಧೀರ್ ಕುಮಾರ್ ರೈ ಮಾನಪತ್ರ ವಾಚಿಸಿದರು. ಮುಳ್ಳೇರಿಯ ಹಿರಿಯ ಫ್ರೌಢಶಾಲಾ ಅಧ್ಯಾಪಕ ಉದಯರಾಜ ಅರಳಿತ್ತಾಯ ಸ್ವಾಗತಿಸಿ, ವಂದಿಸಿದರು. ಯತೀಶ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಘದ ಕಲಾವಿದರಿಂದ ಶ್ರೀಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.