ಮಧೂರು: ವೈವಾಹಿಕ ಜೀವನದ 25ನೇ ವರ್ಷದ ಸವಿನೆನಪಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರದ ಪ್ರಾಯೋಜಕತ್ವವನ್ನು ವಹಿಸಿದ ಮಧೂರು ಸಮೀಪದ ಅರ್ಜುನಗುಳಿ ಎಸ್.ಎನ್. ಭಟ್ ದಂಪತಿಗಳು ಮಾದರಿಯಾಗಿದ್ದಾರೆ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಮುಂತಾದವುಗಳನ್ನು ಅದೆಷ್ಟೋ ದುಬಾರಿ ಖರ್ಚನ್ನು ಮಾಡಿ ಆಚರಿಸುತ್ತಿರುವ ಕಾಲಘಟ್ಟದಲ್ಲಿ ಬಡಜನರಿಗಾಗಿ ಮಾಡಿದ ಸೇವೆ ಸ್ತುತ್ಯರ್ಹವಾಗಿದೆ.
ಭಾನುವಾರ ಮುಜುಂಗಾವು ಶ್ರೀ ಭಾರತೀ ನೇತ್ರಚಿಕಿತ್ಸಾಲಯ, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಕಾಸರಗೋಡು ಇವರ ಆಶ್ರಯದಲ್ಲಿ ತಮ್ಮ ವೈವಾಹಿಕ ಜೀವನದ 25ನೇ ವರ್ಷದ ಸವಿನೆನಪಿಗಾಗಿ ಅರ್ಜುನಗುಳಿ ಯಸ್. ಯನ್. ಭಟ್ ದಂಪತಿಗಳು ಪ್ರಾಯೋಜಕತ್ವದಲ್ಲಿ ಮಧೂರು ಶ್ರೀ ಕ್ಷೇತ್ರದ ಕಲ್ಯಾಣ ಮಂಟಪದಲ್ಲಿ ನಡೆದ ಉಚಿತ ತಪಾಸಣಾ ಶಿಬಿರಕ್ಕೆ ಮಧೂರು ದೇವಳದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಅವರು ದೇವತಾ ಪ್ರಸಾದವನ್ನಿತ್ತು ಶುಭನುಡಿಗಳೊಂದಿಗೆ ಚಾಲನೆಯನ್ನು ನೀಡಿದರು.
ಶ್ರೀ ಭಾರತೀ ನೇತ್ರಚಿಕಿತ್ಸಾಲಯದ ಆಡಳಿತಾಧಿಕಾರಿ ಡಾ. ಶ್ರೀಧರ ಭಟ್ ದೀಪ ಬೆಳಗಿಸಿ ಔಪಚಾರಿಕವಾಗಿ ಉದ್ಘಾಟಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಿರುವನಂತಪುರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ ನಿವೃತ್ತ ಆಡಳಿತಾಧಿಕಾರಿ ಬಿ. ಮಹಾಬಲ ಭಟ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಣ್ಣು ದೇಹದ ಅವಿಭಾಜ್ಯ ಅಂಗ, ಅದರ ರಕ್ಷಣೆ ಬಹಳ ಮುಖ್ಯವಾದುದು, ಅರ್ಜುನಗುಳಿ ದಂಪತಿಗಳು ತಮ್ಮ ವೈವಾಹಿಕ ಜೀವನದ 25ನೇ ವಾರ್ಷಿಕೋತ್ಸವವನ್ನು ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ನಡೆಸುತ್ತಿರುವುದು ಶ್ಲಾಘನೀಯ, ಅವರು ಇನ್ನು ಮುಂದೆಯೂ ಇಂತಹ ಸಮಾಜಮುಖೀ ಚಿಂತನೆಗಳೊಂದಿಗೆ ಮುನ್ನಡೆಯಲಿ ಎಂದು ಹಾರೈಸಿದರು.
ಮುಜುಂಗಾವು ಶ್ರೀಭಾರತೀ ನೇತ್ರಚಿಕಿತ್ಸಾಲಯದ ನೇತ್ರ ತಜ್ಞ ಡಾ. ಆನಂದ್, ಕಾಸರಗೋಡು ಹವ್ಯಕ ವಲಯದ ಅಧ್ಯಕ್ಷ ವೈ. ವಿ. ರಮೇಶ ಭಟ್ ಶುಭಾಸಂಶನೆಗೈದರು. ಅರ್ಜುನಗುಳಿ ಅಮೃತ ಕುಟುಂಬಶ್ರೀ ಸದಸ್ಯರು ಸಂಪೂರ್ಣ ಸಹಕಾರವನ್ನು ನೀಡಿದ್ದರು. ದೀಪಕ್ ಅರ್ಜುನಗುಳಿ ಪ್ರಾರ್ಥನೆಗೈದರು. ಮುಜುಂಗಾವು ಶ್ರೀ ಭಾರತೀ ನೇತ್ರಚಿಕಿತ್ಸಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಇ. ಕೃಷ್ಣಮೋಹನ ಭಟ್ ಸ್ವಾಗತಿಸಿ, ಕೋಶಾಧಿಕಾರಿ ಯಸ್. ಯನ್. ಶರ್ಮ ವಂದಿಸಿದರು. ಸವಿತಾ ಯಸ್. ಯನ್. ಭಟ್ ಅರ್ಜುನಗುಳಿ ಕಾರ್ಯಕ್ರಮ ನಿರೂಪಿಸಿದರು. 75ಕ್ಕೂ ಹೆಚ್ಚುಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.