ಪೆರ್ಲ:ಕಾರ್ತಿಕೇಯ ಚಾರಿಟೇಬಲ್ ಟ್ರಸ್ಟ್ ಪೆರ್ಲ ಆಶ್ರಯದಲ್ಲಿ ಮೇ.26ರಂದು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದ ಸಭಾಂಗಣದಲ್ಲಿ ಸನ್ನಿಧಿ ಟಿ.ರೈ ನಿರ್ದೇಶನದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗಾಗಿ ಉಚಿತ ಮಾಹಿತಿ ಶಿಬಿರ ಸೇಫ್ ಝೋನ್- 2019 ವಿಶೇಷ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9ಕ್ಕೆ ದೇವಳದ ಪ್ರಧಾನ ಅರ್ಚಕ ನಾರಾಯಣ ಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಂಗಳೂರು ಯಸ್.ಡಿ.ಎಂ.ಕಾನೂನು ಕಾಲೇಜು ಉಪನ್ಯಾಸಕಿ ಸೌಮ್ಯ ಸುಭಾಶ್ ರೈ ಅಧ್ಯಕ್ಷತೆ ವಹಿಸುವರು. ದೇವಳದ ಆಡಳಿತ ಮೊಕ್ತೇಸರ ನಾರಾಯಣ ಕಾಟುಕುಕ್ಕೆ, ಗ್ರಾ.ಪಂ.ಸದಸ್ಯೆ ಮಲ್ಲಿಕಾ ಜೆ.ರೈ., ದೀಪಕ್ ಭಂಡಾರದ ಮನೆ ಉಪಸ್ಥಿತರಿರುವರು. ಕರಾಟೆ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಬೆಲ್ಟ್ ವಿತರಣೆ ನಡೆಯಲಿದೆ.
ಲೇಖಕಿ, ಆಕಾಶವಾಣಿ ಉದ್ಘೋಷಕಿ ಸಿದ್ದಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ, ಲೇಖಕಿ, ಕೊಡ್ಲಮೊಗರು ವಾಣೀವಿಜಯ ಪ್ರೌಢಶಾಲೆ ಅಧ್ಯಾಪಕಿ ಆಶಾ ದಿಲೀಪ್ ಸುಳ್ಯಮೆ, ಆಯುರ್ವೇದ ತಜ್ಞೆ ಡಾ.ಸಪ್ನಾ ಜೆ.ಉಕ್ಕಿನಡ್ಕ, ಚೈಲ್ಡ್ ಲೈನ್ ಸಂಯೋಜಕ ಉದಯ ಕುಮಾರ್, ರಂಗ ನಿರ್ದೇಶಕ ಉದಯ ಸಾರಂಗ್, ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತುದಾರ ನಿರ್ಮಲ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವ ಮಾಹಿತಿ ಶಿಬಿರದಲ್ಲಿ ಪ್ರಸ್ತುತಿ ಕೌಶಲ್ಯ, ವೃತ್ತಿ ಪ್ರತಿಭೆ ಮತ್ತು ಸಾಂಸಾರಿಕ ಜೀವನ ಸಮತೋಲನ, ಮಹಿಳೆಯರಲ್ಲಿ ಶಾರೀರಿಕ ಮತ್ತು ಮಾನಸಿಕ ಸಮತೋಲನ, ಆವರಣವಿಲ್ಲದೆ ಸುರಕ್ಷತೆ(ವಸತಿ ಶಾಲೆ, ಪಿ.ಜಿ.ಗಳಲ್ಲಿ ವಾಸಿಸುವ, ಸ್ಪರ್ಧೆ, ಆಡಿಷನ್ ಕಾರಣಗಳಿಂದ ಪೋಷಕರಿಂದ ದೂರವಿರಬೇಕಾದ ಮಕ್ಕಳಿಗೆ), ಸೃಜನಾತ್ಮಕತೆ ಮತ್ತು ನಾವು, ಅಭಿನಯಗೀತೆ, ರಂಗದಾಟ, ಜಾನಪದ ಹಾಡು ಕುಣಿತ ಮಾಹಿತಿ ಶಿಬಿರ ನಡೆಯಲಿದೆ.
ಸಂಜೆ 4ಗಂಟೆಗೆ ಸೆನ್ಸೂಯಿ ಪಿ.ಕೆ.ಆನಂದ್ ಮತ್ತು ಶಿಷ್ಯರಿಂದ ಸ್ವಯಂ ರಕ್ಷಣೆ, ಕರಾಟೆ, ಕಳರಿ ಮತ್ತು ಯೋಗ ಪ್ರಾತ್ಯಕ್ಷಿಕೆ, 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸ್ವರ್ಗ ಸ್ವಾಮಿ ವಿವೇಕಾನಂದ ಶಾಲೆ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಅಧ್ಯಕ್ಷತೆ ವಹಿಸುವರು.ಸನ್ನಿಧಿ ಟಿ.ರೈ ಪ್ರಾಸ್ತಾವಿಕ ಮಾತುಗಳನ್ನಾಡುವಳು.ಉದ್ಯಮಿ, ಮುಂಬಯಿ ಬಂಟರ ಸಂಘ ಮಾಜೀ ಅಧ್ಯಕ್ಷ, ಪಡುಬಿದ್ರಿ ಇನ್ನ ಪಂಚಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಮೇರ್ಕಳ ತ್ಯಾಂಪಣ್ಣ ಶೆಟ್ಟಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿರುವರು. ಅಂತಾರಾಷ್ಟ್ರೀಯ ವೈಟ್ ಲಿಫ್ಟರ್ ವಿನುತಾ ಸತೀಶ್ ನಮ್ಮೂರ ಸಾಧಕಿ ಗೌರವ ಸ್ವೀಕರಿಸುವರು. ದೇವಳದ ಆಡಳಿತ ಮಂಡಳಿ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿ ಸಹಕಾರದಲ್ಲಿ ನಡೆಯುವ ಕಾರ್ಯಕ್ರಮವನ್ನು ಉದ್ಯಮಿ ತಾರಾನಾಥ ರೈ, ರಾಜಶ್ರೀ ಟಿ.ರೈ ಪೆರ್ಲ ನಿರ್ವಹಿಸಲಿದ್ದಾರೆ.