ಭುವನೇಶ್ವರ: ಒಡಿಶಾ ಕಡಲ ತೀರಕ್ಕೆ ಶುಕ್ರವಾರ ಬೆಳಗ್ಗೆ ಅಪ್ಪಳಿಸಿದ ಫೋನಿ ಚಂಡಮಾರುತ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ಚಂಡಮಾರುತದಿಂದಾಗಿ ಸೃಷ್ಟಿಯಾದ ವಿವಿಧ ಅವಘಡಗಳಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಚಂಡಮಾರುತ ಪೀಡಿತ ರಾಜ್ಯಗಳಿಗೆ ತುರ್ತು ಪರಿಹಾರಕ್ಕಾಗಿ 1,000 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.
ಶುಕ್ರವಾರ ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಫೋನಿ ಚಂಡಮಾರುತಕ್ಕೆ ಸಂಬಧಿಸಿದಂತೆ ನಾನು ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದೇನೆ. ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಪ್ರತಿ ಗಂಟೆಗೆ 200 ಕಿ. ಮೀ ವೇಗದಲ್ಲಿ ಪುರಿ ಕಡಲ ತೀರಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತ ಮಧ್ಯಾಹ್ನದವರೆಗೂ ಒಡಿಶಾ ಕರಾವಳಿ ತೀರದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯನ್ನು ಸುರಿಸಿತು.
ಇದೀಗ ಚಂಡಮಾರುತದ ಅಬ್ಬರ ಕೊಂಚ ತಗ್ಗಿದ್ದು, ಚಂಡಮಾರುತ ಪಶ್ಚಿಮ ಬಂಗಾಳದತ್ತ ಮುಖಮಾಡಿದೆ. ಕಡಲ ತೀರಕ್ಕೆ ಒಪ್ಪಳಿಸಿದ ಚಂಡಮಾರುತದ ವೇಗ ಬೆಳಗ್ಗೆ ಪ್ರತೀ ಗಂಟೆಗೆ 245 ಕಿ.ಮೀ ಇತ್ತು. ಇದೀಗ ಚಂಡಮಾರುತದ ವೇಗ ಕಡಿಮೆಯಾಗಿದ್ದು, ಪ್ರತೀ ಗಂಟೆಗೆ 150-160 ವೇಗದಲ್ಲಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಫೋನಿ ಚಂಡಮಾರುತ ಉತ್ತರ ಮತ್ತು ಈಶಾನ್ಯ ಭಾರತದತ್ತ ಧಾವಿಸುತ್ತಿದ್ದು, ಕಟಕ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಶನಿವಾರ ಫೋನಿ ಚಂಡಮಾರುತ ಪಶ್ಚಿಮ ಬಂಗಾಳ ಪ್ರವೇಶ ಮಾಡುವ ಸಾಧ್ಯತೆ ಇದ್ದು, ಅಲ್ಲಿಯೂ ಭಾರಿ ಬಿರುಗಾಳಿ ಸಹಿತ ಮಳೆ ತರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.