ಕಾಸರಗೋಡು: ರಾಜ್ಯದ ಶಾಲೆಗಳಲ್ಲಿ ಮಧ್ಯಾಹ್ನದ ಊಟ ವಿತರಣೆಗೆ ಈ ವರ್ಷ 342 ಕೋಟಿ ರೂ.ಗಳ ಯೋಜನೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಅಂಗೀಕಾರ ನೀಡಿದೆ. ಇದರಲ್ಲಿ 219 ಕೋಟಿ ರೂ. ಕೇಂದ್ರ ಸರಕಾರವು ನೀಡಲಿದೆ. ಬಾಕಿ ಉಳಿದ ಹಣವನ್ನು ಕೇರಳ ಸರಕಾರವು ವಹಿಸಲಿದೆ.
ಈ ಯೋಜನೆಗೆ ಕೇರಳ ಸರಕಾರವು ಆಗ್ರಹಿಸಿದಷ್ಟು ಮೊತ್ತವನ್ನು ಕೇಂದ್ರ ಮಂಜೂರು ಮಾಡಿದೆ. ಕಳೆದ ವರ್ಷಕ್ಕಿಂತಲೂ 20 ಕೋಟಿ ರೂ. ಹೆಚ್ಚು ಹಣ ಕೇಂದ್ರ ಸರಕಾರವು ಈ ಬಾರಿ ಕೇರಳಕ್ಕೆ ನೀಡಿದೆ. ಕೇರಳದ ಶಾಲೆಗಳು ಮಧ್ಯಾಹ್ನದೂಟ ವಿತರಣೆಗಾಗಿ ರಾಜ್ಯದ ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿ ಎ.ಶಾಜಹಾನ್ ಅವರು ಕೇಂದ್ರ ಸರಕಾರಕ್ಕೆ 342 ಕೋಟಿ ರೂ.ಗಳ ಯೋಜನೆ ಸಲ್ಲಿಸಿದ್ದರು. ಅದಕ್ಕೆ ಕೇಂದ್ರ ಸರಕಾರವು ಪೂರ್ಣ ಅಂಗೀಕಾರ ನೀಡಿದೆ.
ಮಧ್ಯಾಹ್ನದ ಊಟ ವಿತರಣೆಯ ವ್ಯಾಪ್ತಿಗೊಳಪಡುವ ಶಾಲೆಗಳಲ್ಲಿ ತರಕಾರಿ ತೋಟ ನಿರ್ಮಿಸಲು ಸರಕಾರವು ಪ್ರತೀ ಶಾಲೆಗಳಿಗೆ ತಲಾ 5,000 ರೂ. ನಂತೆ ಮಂಜೂರು ಮಾಡಿದೆ. ಇದರ ಹೊರತಾಗಿ 1,285 ಶಾಲೆಗಳ ಅಡುಗೆ ಕೊಠಡಿಗಳ ನವೀಕರಣಕ್ಕಾಗಿ ಪ್ರತೀ ಶಾಲೆಗೆ ತಲಾ 10,000 ರೂ. ನಂತೆಯೂ ಮಂಜೂರು ಮಾಡಿದೆ. 3031 ಶಾಲೆಗಳಲ್ಲಿ ಈ ವರ್ಷ ಅಡುಗೆ ಕೊಠಡಿಗಳನ್ನು ನಿರ್ಮಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಮಧ್ಯಾಹ್ನದ ಊಟ ವಿತರಣೆಯಲ್ಲಿ ಕೇರಳ ಸರಕಾರದ ನಿರ್ವಹಣೆಗೂ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪ್ರಶಂಸೆ ವ್ಯಕ್ತಪಡಿಸಿದೆ.