HEALTH TIPS

ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರಿಗೆ 'ಸಾಯಿ ಪ್ರಸಾದ'-ಸಂತ್ರಸ್ತರಿಗಾಘ ನಿರ್ಮಾಣಗೊಂಡಿದೆ ಪೆರ್ಲದಲ್ಲಿ 36 ಮನೆಗಳು

 

           ಪೆರ್ಲ: ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತ ಕುಟುಂಬಗಳಿಗಾಗಿ ಶ್ರೀ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್ ವತಿಯಿಂದ ಎಣ್ಮಕಜೆಯಲ್ಲಿ ನಿರ್ಮಿಸಲಾದ ಮನೆಗಳು ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಮಂಜೇಶ್ವರ ತಾಲೂಕು ಎಣ್ಮಕಜೆ ಪಂಚಾಯಿತಿಯ ಪೆರ್ಲ ಸನಿಹದ ಕಾನದಲ್ಲಿ ಒಟ್ಟು 36ಮನೆಗಳನ್ನು ನಿರ್ಮಿಸಲಾಗಿದ್ದು, ಸಂತ್ರಸ್ತ ಕುಟುಂಬಗಳಿಗೆ ಮನೆಗಳ ಕೀಲಿಕೈ ಹಸ್ತಾಂತರ ಶೀಘ್ರ ನಡೆಯಲಿದೆ.
      ಕೇರಳ ಸರ್ಕಾರ ಮತ್ತು ಶ್ರೀ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ಸಂಯುಕ್ತವಾಗಿ ಯೋಜನೆ ಜಾರಿಗೊಳಿಸುತ್ತಿದೆ. ಸರ್ಕಾರ ಮಂಜೂರುಗೊಳಿಸಿಕೊಡುವ ಭೂಮಿಯಲ್ಲಿ ಟ್ರಸ್ಟ್ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಎಂಡೋದುಷ್ಪರಿಣಾಮಪೀಡಿತರಿಗೆ ಹಸ್ತಾಂತರಿಸುವ ಮೂಲಕ ಸಂತ್ರಸ್ತರ ಕಣ್ಣೀರು ಒರೆಸಲು ಮುಂದಾಗಿದೆ.
  ಇಲ್ಲಿ ಸುಸಜ್ಜಿತ ಮನೆಗಳ ನಿರ್ಮಾಣವಾಗಿದ್ದು, ಸುಣ್ಣ, ಬಣ್ಣ ಬಳಿದು ಕಂಗೊಳಿಸುತ್ತಿದೆ. ಕಾನ ತಿಂಗಳಪದವಿನ ಎತ್ತರ ಪ್ರದೇಶದಲ್ಲಿ ಸಾಲು ಮನೆಗಳನ್ನು ನಿರ್ಮಿಸಲಾಗಿದ್ದು, ಇಲ್ಲಿ ಮಕ್ಕಳ ಪಾರ್ಕ್, ಉದ್ಯೋಗ ತರಬೇತಿ ಕೇಂದ್ರ, ಸಮುದಾಯಭವನ, ಎಂಡೋಸಂತ್ರಸ್ತರ ಮಕ್ಕಳಿಗಾಗಿ ಬಡ್ಸ್ ಶಾಲೆಯ ನಿರ್ಮಾಣದ ಗುರಿಯಿರಿಸಲಾಗಿದೆ. ಈಗಾಗಲೇ ಜಿಲ್ಲೆಯ ಎಂಡೋಸಂತ್ರಸ್ತ 36ಕುಟುಂಬಗಳನ್ನು ಗುರುತಿಸಲಾಗಿದ್ದು, ಇವರಿಗೆ ಸಾಯಿಗ್ರಾಮದಲ್ಲಿ ಸೂರು ಕಲ್ಪಿಸುವ ಮಹತ್ವದ ಯೋಜನೆ ಕಾರ್ಯಗತಗೊಳ್ಳಲಿದೆ. ಮನೆಗಳ ನಿರ್ಮಾಣಕ್ಕಾಗಿ 2017 ಮಾರ್ಚ್ ತಿಂಗಳಲ್ಲಿ ಶಿಲಾನ್ಯಾಸ ನಡೆಸಲಾಗಿದ್ದು, ಎರಡು ವರ್ಷದೊಳಗೆ ಕಾಮಗಾರಿ ಪೂರ್ತಿಗೊಳಿಸಲಾಗಿದೆ.
      ರಸ್ತೆ ತಕರಾರು:
   ಮುಖ್ಯರಸ್ತೆಯಿಂದ ಸಾಯಿಗ್ರಾಮಕ್ಕೆ ತೆರಳುವ ಹಾದಿ ಒಳಗೊಂಡ ಭೂಮಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ್ದು, ಸರ್ವಋತು ಸಂಚಾರದ ರಸ್ತೆ ನಿರ್ಮಾಣಕ್ಕೆ ಇದು ತೊಡಕಾಗುತ್ತಿದೆ. ಈ ಜಾಗ ಲಭ್ಯವಾಗಿಸುವ ಬಗ್ಗೆ ಪ್ರಯತ್ನ ಮುಂದುವರಿದಿದೆ. ಈ ಜಾಗಕ್ಕೆ ಸಮಾನವಾದ ಭೂಮಿಯನ್ನು ಬೇರೊಂದು ಕಡೆ ಒದಗಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರೂ ಸಕಾರಾತ್ಮಕ ನಿಲುವು ವ್ಯಕ್ತಪಡಿಸಿದ್ದಾರೆ. ಎಂಡೋಸಂತ್ರಸ್ತರ ನೋವು ಪರಿಗಣಿಸಿ, ಜಾಗದ ವಾರೀಸುದಾರರು ಜಾಗ ಒದಗಿಸಿಕೊಡುವ ಬಗ್ಗೆ ಜಾಗ ಬಿಟ್ಟುಕೊಡಲು ಮುಂದಾಗಲಿದ್ದಾರೆ ಎಂದೂ ಟ್ರಸ್ಟ್ ಅಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
       ತೀರ್ಥ ಸ್ನಾನಕ್ಕೆ ಆತಂಕ:
ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವರ ಅಭಿಷೇಕ ಹಾಗೂ ನೈವೇದ್ಯ ತಯಾರಿಗಾಗಿ ಕಾನ  ಶ್ರೀ ಶಾಸ್ತಾರ ಸನ್ನಿಧಿಯ ತೊರೆಯಿಂದ ನೀರು ಕೊಂಡೊಯ್ಯಲಾಗುತ್ತಿದೆ. ತಿಂಗಳಪದವಿನಲ್ಲಿ ಸಾಯಿಟ್ರಸ್ಟ್ ಸಂತ್ರಸ್ತರಿಗಾಗಿ ಮನೆ ನಿರ್ಮಾಣಮಾಡಿರುವುದರಿಂದ, ಇಲ್ಲಿನ ಕೊಳಚೆನೀರು ಕಾನಕ್ಕೆ ಹರಿದು ಶುಚಿತ್ವ ಹಾಗೂ ಪಾವಿತ್ರ್ಯತೆ ಹಾಳಾಗುವ ಬಗ್ಗೆ ನಾಗರಿಕರು ಭೀತಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ರಸ್ಟ್ ಪದಾಧಿಕಾರಿಗಳು ಗಮನಹರಿಸುವಂತೆ ಭಕ್ತಾದಿಗಳು ಮನವಿ ಮಾಡಿದ್ದಾರೆ.
  ಅಭಿಮತ:
  ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ  ತಲಾ ಒಂದು ಮನೆಯನ್ನು ನಿರ್ಮಿಸಲಾಗಿದ್ದು, ಕೆಲಸಕಾರ್ಯ ಬಹುತೇಕ ಪೂರ್ತಿಗೊಂಡಿದೆ. ಚುನಾವಣೆ ಪ್ರಕ್ರಿಯೆ ಪೂರ್ತಿಗೊಂಡ ನಂತರ ಫಲಾನುಭವಿಗಳಿಗೆ ಕೀಲಿಕೈ ಹಸ್ತಾಂತರ ಸಮಾರಂಭ ನಡೆಯಲಿದೆ. ಮಕ್ಕಳ ಪಾರ್ಕ್ ಸಹಿತ ಕೆಲವೊಂದು ಸೌಕರ್ಯ ಒಳಗೊಂಡಂತೆ ಮತ್ತಷ್ಟು ಕೆಲಸಕಾರ್ಯಗಳೂ ಇಲ್ಲಿ ನಡೆಯಲು ಬಾಕಿಯಿದೆ. ಸಾಯಿ ಗ್ರಾಮಕ್ಕೆ ಆಗಮಿಸುವ ರಸ್ತೆ ಅಭಿವೃದ್ಧಿಕಾರ್ಯವೂ ನಡೆಯಬೇಕಾಗಿದೆ.
ವಕೀಲ, ಮಧುಸೂಧನನ್, ಕೋಶಾಧಿಕಾರಿ
ಶ್ರೀ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries