ನವದೆಹಲಿ: ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ತಿಳಿಸಿದೆ.
ಸಾಮಾನ್ಯವಾಗಿ ಮುಂಗಾರು ಮಳೆ ಜೂನ್ 1ರಂದು ಕೇರಳ ಕರಾವಳಿ ಪ್ರವೇಶಿಸುತ್ತದೆ ಮತ್ತು ಜುಲೈ ಮಧ್ಯದೊಳಗೆ ಇಡೀ ದೇಶವನ್ನು ವ್ಯಾಪಿಸುತ್ತದೆ. ಸಕಾಲದಲ್ಲಿ ಮುಂಗಾರು ಮಳೆ ಆಗಮಿಸಿದಲ್ಲಿ ದೇಶದಲ್ಲಿ ಭತ್ತ, ಸೋಯಾಬೀನ್ ಮತ್ತು ಹತ್ತಿ ಬೆಳೆ ಬಿತ್ತನೆ ಕಾರ್ಯಗಳು ಸಾಂಗವಾಗಿ ನಡೆಯಲು ಸಾಧ್ಯ.
2019ರಲ್ಲಿ ದೇಶದಲ್ಲಿ ದೀರ್ಘಾವಧಿ ಸರಾಸರಿ ಶೇ. 93ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಫೋನಿ ಚಂಡಮಾರುತ ಸೇರಿದಂತೆ ಮತ್ತಿತರ ಹಮಾಮಾನ ಕಾರಣಗಳಿಂದಾಗಿ ಈ ಬಾರಿ ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬವಾಗಲಿದ್ದು, ವಾರ್ಷಿಕ ಮಳೆಯಲ್ಲೂ ಕೊರತೆ ಉಂಟಾಗುವ ಆತಂಕ ಎದುರಾಗುವ ಸಾಧ್ಯತೆ ಇದೆ.
ಕೇಂದ್ರ ಹವಾಮಾನ ಇಲಾಖೆ ಕಳುಹಿಸಿರುವ ಸೂಚನೆಯಂತೆ ಮುಂಗಾರು ಮಳೆಯಲ್ಲಿ ಸ್ವಲ್ಪ ಮಟ್ಟಿಗೆ ಕೊರತೆ ಎದುರಾಗಲಿದ್ದು, ಮತ್ತೊಂದು ಖಾಸಗಿ ಸಂಸ್ಥೆ ಅಂದಾಜಿಸಿರುವಂತೆ ರಾಜ್ಯದಲ್ಲಿ ಶೇ 10 ರಿಂದ 15 ರಷ್ಟು ಮಳೆ ಕೊರತೆ ಎದುರಾಗಬಹುದು ಎನ್ನಲಾಗಿದೆ.
ಆದರೆ ಕಳವಳ ಪಡಬೇಕಿಲ್ಲ. ಪ್ರಾಥಮಿಕ ವರದಿಗಳ ಪ್ರಕಾರ ಮುಂಗಾರು ಮಾರುತ ಕಡಿಮೆಯಾಗಬಹುದು. ಆದರೆ ಜೂನ್ ಮೊದಲ ವಾರದಲ್ಲಿ ಕೇಂದ್ರ ಹವಾಮಾನ ಇಲಾಖೆ ದೇಶದ ನಾಲ್ಕು ವಿಭಾಗಗಳಿಗೆ ಮತ್ತೊಂದು ಸುತ್ತಿನ ಮುನ್ಸೂಚನೆ ಕಳುಹಿಸಲಿದ್ದು, ಅದರಲ್ಲಿ ಮಳೆ ಪರಿಸ್ಥಿತಿ ಕುರಿತು ಅಧಿಕೃತ ಮತ್ತು ಖಚಿತ ಮಾಹಿತಿ ದೊರೆಯಲಿದೆ.
ಮುಂಗಾರು ಮಳೆ ಶೇ 94 ರಿಂದ 104 ರಷ್ಟಿದ್ದರೆ ಅದು ವಾಡಿಕೆ ಮಳೆಯಾಗುತ್ತದೆ. ರಾಜ್ಯದಲ್ಲಿ ಒಟ್ಟು ಬೀಳುವ ಮಳೆಯ ಪೈಕಿ ಶೇ 72 ರಷ್ಟು ಮಳೆ ಮುಂಗಾರು ಅವಧಿಯಲ್ಲಿ ಸುರಿಯುತ್ತದೆ.