ಕಾಸರಗೋಡು: ತೀವ್ರ ಶುಚೀಕರಣ ಯಜ್ಞ ಯೋಜನೆ ಅಂಗವಾಗಿ ಚೆರುವತ್ತೂರ್ ಗ್ರಾಮಪಂಚಾಯತ್ ನ 5 ಕೆರೆಗಳ ಶುಚೀಕರಣ ಏಕಕಾಲಕ್ಕೆ ನಡೆದಿದೆ.
ಕಾರಿಪಳ್ಳಿ ಕುಂಡಂಕುಳಂ, ಅರೀಂದ್ರನ್ ಕುಂಡಂಕುಳಂ, ತೆಕ್ಕೇ ವೀಡಿನ್ ತಾಳೆಯುಳ್ಳ ಕೆರೆ, ಕೊಟ್ಟುಂಬುರಂ ಕೆರೆ, ಅಮ್ಮಿಂಞÂಕೋಡ್ ಕೆರೆಗಳ ಶುಚೀಕರಣ ಈ ಸಂದರ್ಭನಡೆದಿವೆ. ಗ್ರಾಮಪಂಚಾಯತ್ ಅಧ್ಯಕ್ಷ ಮತ್ತು ಇತರ ಜನಪ್ರತಿನಿಧಿಗಳು ನೇತೃತ್ವ ವಹಿಸಿದ್ದರು. ಕುಟುಂಬಶ್ರೀ ಕಾರ್ಯಕರ್ತರು, ನೌಕರಿ ಖಾತರಿ ಯೋಜನೆಯ ಕಾರ್ಮಿಕರು, ಹರಿತ ಕ್ರಿಯಾ ಸೇನೆ ಸದಸ್ಯರು ಶುಚೀಕರಣ ನಡೆಸಿದರು.
ತೆಂಗಿನ ಮಡಲು, ಇತರ ಮರಗಳ ಎಲೆಗಳು ಇತ್ಯಾದಿ ನಿರಂತರವಾಗಿ ಬೀಳುತ್ತಿರುವ ಪರಿಣಾಮ ಈ ಕೆರೆಗಳು ಅನೇಕ ಕಾಲಗಳಿಂದ ತ್ಯಾಜ್ಯಯುಕ್ತವಾಗಿದ್ದುವು. ಬೇಸಗೆಯಾದುದರಿಂದ ಕೆರೆಗಳಲ್ಲಿ ನೀರು ಕಡಿಮೆಯಿದ್ದುದು ಶುಚೀಕರಣಕ್ಕೆ ಪೂರಕವಾಗಿತ್ತು. ಆರಂಭಕ್ಕೆ ಮಡಲು, ಎಲೆ ಇತ್ಯಾದಿ ತ್ಯಾಜ್ಯಗಳನ್ನು ತೆರವುಗೊಳಿಸಿ, ನಂತರ ಅಡಿಭಾಗದ ಕೆಸರನ್ನು ಮೇಲಕ್ಕೆತ್ತಲಾಗಿತ್ತು. ಕೆರೆಗಳ ಸುತ್ತಲೂ ಬೆಳೆದಿದ್ದ ಕಾಡಪೊದೆ ಕಡಿದು, ಕೆರೆಗಳಿಗೆ ಕಾಲುದಾರಿಯನ್ನೂ ನಿರ್ಮಿಸಲಾಗಿದೆ. ಈ ಕೆರೆಗಳ ಪುನಶ್ಚೇತನ ಮೂಲಕ ಸ್ಥಳೀಯ ಜನೆತೆಗ ಕೃಷಿ, ಬಟ್ಟೆ ಒಗೆಯಲು ಇತ್ಯಾದಿಗೆ ಪೂರಕವಾಗಿದೆ.