ನವದೆಹಲಿ: ಇಂದಿನ ಸ್ಪರ್ಧಾತ್ಮಕ ತಾಂತ್ರಿಕ ಯುಗದಲ್ಲಿ ಮಕ್ಕಳ ಮೇಲೆ ಅಪಾರ ನಿರೀಕ್ಷೆಯಿಟ್ಟುಕೊಳ್ಳುವ ಪೋಷಕರು ಪರೀಕ್ಷೆಯಲ್ಲಿ ತಮ್ಮ ಮಕ್ಕಳು ಉತ್ತಮ ಅಂಕ ಗಳಿಸಬೇಕೆಂದು ಬಯಸುತ್ತಾರೆ. ತಮ್ಮ ಆಸೆ-ಆಕಾಂಕ್ಷೆಗಳೆಲ್ಲವನ್ನೂ ಮಕ್ಕಳ ಮೇಲೆ ಹೇರುತ್ತಾರೆ. ಇನ್ನು 10 ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಂತೂ ಕೇಳುವುದೇ ಬೇಡ.
ಇತ್ತೀಚೆಗೆ ಪ್ರಕಟವಾದ ಸಿಬಿಎಸ್ 10ನೇ ತರಗತಿ ಫಲಿತಾಂಶದಲ್ಲಿ ತಮ್ಮ ಮಗ ಶೇಕಡಾ 60 ಅಂಕ ಗಳಿಸಿದಾಗ ಆತನ ತಾಯಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಸ್ಟೇಟಸ್ ವೈರಲ್ ಆಗಿತ್ತು. ಈ ತಾಯಿಯ ಮಾತುಗಳು ಇಂದಿನ ಶಿಕ್ಷಣ ವ್ಯವಸ್ಥೆ, ಪೋಷಕರ ಮನೋಧರ್ಮದ ನಡುವೆ ಯೋಚಿಸಬೇಕಾದ ಗಮನಾರ್ಹ ವಿಚಾರ.
ಕಳೆದ ಸೋಮವಾರ ಸಿಬಿಎಸ್ ಇ ಫಲಿತಾಂಶ ಪ್ರಕಟವಾದ ನಂತರ ದೆಹಲಿಯ ವಂದನಾ ಕಟೊಚ್ ಎಂಬ ತಾಯಿ ತನ್ನ 15 ವರ್ಷದ ಆಮರ್ ಎಂಬ ಪುತ್ರ ಶೇಕಡಾ 60 ಅಂಕ ಗಳಿಸಿದ್ದಕ್ಕೆ ಅಭಿನಂದನೆಗಳು ಮಗನೇ, ನಿನಗೊಂದು ದೊಡ್ಡ ಅಪ್ಪುಗೆ ಎಂದು ಫೇಸುಬುಕ್ ನಲ್ಲಿ ಬರೆದು ಸಂಭ್ರಮಿಸಿದ್ದರು. ಆದರೆ ಮಗನಿಗೆ ತನ್ನ ಕಡಿಮೆ ಅಂಕ ಕಂಡು ನನ್ನನ್ನು ಅಭಿನಂದಿಸುವುದಕ್ಕೇನಿದೆ, ನಾನು ಉತ್ತಮ ಅಂಕ ಗಳಿಸಲಿಲ್ಲವಲ್ಲ ಎಂದು ಕೇಳಿದನಂತೆ.
ಅದಕ್ಕೆ ತಾಯಿ ವಂದನಾ ಮಗ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹೊಂದಿಕೊಳ್ಳಲು ಮಾನಸಿಕವಾದ ಬೆಂಬಲ ನೀಡುತ್ತಾರೆ. ಹಿಂದೆ ನೀನು ಎಲ್ಲಿದ್ದೆ, ಈಗ ಎಲ್ಲಿ ಬಂದು ನಿಂತಿದ್ದೀಯಾ ಎಂದು ನೋಡು, ಇವೆಲ್ಲ ನಿನ್ನ ಕಠಿಣ ಪರಿಶ್ರಮದಿಂದ ಸಾಧ್ಯವಾಯಿತು. ನಿನ್ನ ಭವಿಷ್ಯ ಇಲ್ಲಿಗೇ ಮುಗಿದಿಲ್ಲ ಎಂದಾಗ ಆತನ ಮುಖದಲ್ಲಿ ನಗು ಮೂಡಿತು, ನಾವು ಖುಷಿಯಾದೆವು ಎಂದು ತಾಯಿ ವಂದನಾ ಹೇಳುತ್ತಾರೆ.
ಅನೇಕ ಮಕ್ಕಳ ಪೋಷಕರು ತಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಬದಲು ಅದನ್ನು ಹೊಸಕಿ ಹಾಕುತ್ತಾರೆ. ಜೀವನವನ್ನು ಒಂದೇ ದೃಷ್ಟಿಯಿಂದ ನೋಡುತ್ತಾರೆ. ಆದರೆ ಅದು ಸರಿಯಲ್ಲ ಎನ್ನುತ್ತಾರೆ ವಂದನಾ.
10ನೇ ತರಗತಿಯ ವಾರ್ಷಿಕ ಪರೀಕ್ಷೆಗಿಂತ ಮೊದಲು ಜನವರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಆಮಿರ್ ಇನ್ನೂ ಕಡಿಮೆ ಅಂಕ ಗಳಿಸಿದ್ದನು. ತಾನು ಈ ಬಾರಿ ಫೈಲಾಗುತ್ತೇನೆ ಎಂದೇ ಭಯಪಟ್ಟುಕೊಂಡಿದ್ದನು. ಆದರೆ ನಾವು ನೈತಿಕವಾಗಿ ಅವನಿಗೆ ಉತ್ತೇಜನ ನೀಡಿದೆವು. ನಂತರ ವಾರ್ಷಿಕ ಪರೀಕ್ಷೆಗೆ ಮುನ್ನ ಇದ್ದ ಕಡಿಮೆ ಅವಧಿಯಲ್ಲಿ ಕಠಿಣ ಶ್ರಮ ಹಾಕಿದ. ಎಲ್ಲಾ ಸಿಲೆಬಸ್ ಗಳನ್ನು ಓದಿ ಮುಗಿಸುವುದು ಕಷ್ಟವಾಗಿತ್ತು. ಆಗ ನಾವು ಅವನು ಯಾವುದರಲ್ಲಿ ಚೆನ್ನಾಗಿ ಇದ್ದಾನೆ ಎಂದು ನೋಡಿಕೊಂಡು ಅದರ ಮೇಲೆ ಗಮನ ಹರಿಸಿ ಓದಲು ಹೇಳಿದೆವು. ಅವನಲ್ಲಿಯೂ ಹಠ ಬೆಳೆಯಿತು, ನಾನು ಹಗಲು ಅವನ ಪಕ್ಕ ಕುಳಿತು ಹೇಳಿಕೊಡುತ್ತಿದ್ದೆ. ಸಾಯಂಕಾಲ ಕೋಚ್ ಹತ್ತಿರ ಕಳುಹಿಸುತ್ತಿದ್ದೆ ಅವರು ಪರೀಕ್ಷೆ ತೆಗೆದುಕೊಳ್ಳುತ್ತಿದ್ದರು ಎಂದು 45 ವರ್ಷದ ವಂದನಾ ಹೇಳುತ್ತಾರೆ.
ಉತ್ತಮ ಓದುಗನಾಗಿರುವ ಆಮಿರ್ ದೆಹಲಿಯ ವಸಂತ್ ವಾಲಿ ಸ್ಕೂಲ್ ನ ವಿದ್ಯಾರ್ಥಿ. 11ನೇ ತರಗತಿಯಲ್ಲಿ ಸೈಕಾಲಜಿ, ಹಿಸ್ಟರಿ,ಪೊಲಿಟಿಕಲ್ ಸೈನ್ಸ್ ಮತ್ತು ಸೋಷಿಯಲ್ ಸೈನ್ಸ್ ವಿಷಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.