ಮುಂಬೈ: ಪಾಕಿಸ್ತಾನ ಮೂಲದ ಮಾದಕ ದ್ರವ್ಯ ಮಾಫಿಯಾಗೆ ಭಾರತೀಯ ನೌಕಾಪಡೆ ಭರ್ಜರಿ ತಿರುಗೇಟು ನೀಡಿದ್ದು, ಭಾರತಕ್ಕೆ ರವಾನೆ ಮಾಡಲು ಕಳುಹಿಸಲಾಗಿದ್ದ ಸುಮಾರು 600 ಕೋಟಿ ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ.
ನೈರುತ್ಯ ಗುಜರಾತ್ ನ ಕಚ್ ಪ್ರಾಂತ್ಯದ ಜಖಾವ್ ನ ಅರೇಬಿಯನ್ ಸಮುದ್ರದಲ್ಲಿ ಭಾರತದತ್ತ ಸಾಗಿ ಬರುತ್ತಿದ್ದ ಪಾಕಿಸ್ತಾನ ಮೂಲದ ಅಲ್ ಮದೀನ್ ಮೀನುಗಾರಿಕಾ ಬೋಟ್ ನಲ್ಲಿ ಅಪಾರ ಪ್ರಮಾಣದ ಹೆರಾಯಿನ್ ಸಾಗಿಸುತ್ತಿರುವ ಕುರಿತು ಮೊದಲೇ ಮಾಹಿತಿ ಪಡೆದಿದ್ದ ಕರಾವಳಿ ಭದ್ರತಾ ಪಡೆಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿವೆ. ಈ ವೇಳೆ ಬೋಟ್ ನಲ್ಲಿದ್ದ ಎಲ್ಲ 13 ಸಿಬ್ಬಂದಿಗಳನ್ನು ಬಂಧಿಸಿದ ಭದ್ರತಾ ಪಡೆ ಸಿಬ್ಬಂದಿ, ಬೋಟ್ ನಲ್ಲಿದ್ದ ಸುಮಾರು 600 ಕೋಟಿ ಮೌಲ್ಯದ 200 ಕೆಜಿ ತೂಕದ 195 ಪ್ಯಾಕೆಟ್ ಹೆರಾಯಿನ್ ಅನ್ನು ವಶಕ್ಕೆ ತೆಗೆದುಕೊಂಡಿವೆ.
ಇತ್ತೀಚಿನ ದಿನಗಳಲ್ಲಿ ಭಾರತೀಯ ಕರಾವಳಿ ಭದ್ರತಾ ಪಡೆ ನಡೆಸಿದ ಅತ್ಯಂತ ದೊಡ್ಡ ಕಾರ್ಯಾಚರಣೆ ಇದು ಎಂದು ಹೇಳಲಾಗುತ್ತಿದೆ. ಅತ್ತ ಕರಾವಳಿ ಭದ್ರತಾ ಪಡೆಗಳು ಅಲ್ ಮದೀನಾ ಬೋಟ್ ಅನ್ನು ಸುತ್ತುವರೆದಂತೆಯೇ ಬೋಟ್ ನಲ್ಲಿದ್ದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದರು. ಈ ವೇಳೆ ತಮ್ಮ ಚಾಕಚಕ್ಯತೆ ತೋರಿದ ಅಧಿಕಾರಿಗಳು ಬೋಟ್ ನ ಮಾರ್ಗ ಬದಲಿಸುವಂತೆ ಮಾಡಿ ಮತ್ತೊಂದು ಮಾರ್ಗವಾಗಿ ಆ ಬೋಟ್ ಅನ್ನು ವಶಕ್ಕೆ ಪಡೆದಿದ್ದಾರೆ ಎಂದು ಕರಾವಳಿ ಭದ್ರತಾ ಪಡೆಯ ಅಡಿಷನಲ್ ಡೈರಕ್ಟರ್ ಜನರಲ್ ಕೆ ನಟರಾಜನ್ ತಿಳಿಸಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಗುಜರಾತ್ ಎಟಿಎಸ್ ತಂಡ ಅಹ್ಮದಾಬಾದ್ ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ 300 ಕೋಟಿ ಮೌಲ್ಯದ 100 ಕೆಜಿ ಹೆರಾಯಿನ್ ಅನ್ನು ವಶಕ್ಕೆ ಪಡೆದುಕೊಂಡಿತ್ತು,