ಉಪ್ಪಳ: ತೆಂಕುತಿಟ್ಟು ಯಕ್ಷಗಾನದಲ್ಲಿ ಸರ್ವಾಂಗಗಳ ಪರಿಣತಿ ಹೊಂದಿ ವೃತ್ತಿಮೇಳದ ಕಲಾವಿದರನ್ನೂ ಮೀರಿನಿಂತ, ಜನಪ್ರಿಯ ಹವ್ಯಾಸಿ ಕಲಾವಿದ, ಸಮರ್ಥ ಯಕ್ಷಗುರು ಬಾಯಾರು ರಮೇಶ ಶೆಟ್ಟಿ 60ರ ಹೊಸ್ತಿಲಿನಲ್ಲಿದ್ದಾರೆ. ಇದರಂಗವಾಗಿ ಅವರ ಶಿಷ್ಯರು ಮತ್ತು ಆಪ್ತೇಷ್ಟ ಅಭಿಮಾನಿಗಳು ಸಂಯುಕ್ತವಾಗಿ ಮೇ 25, 26ರಂದು ಬಾಯಾರಿನ ಮುಳಿಗದ್ದೆಯ ಹೆದ್ದಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ದ್ವಿದಿನ ಅಭಿನಂದನಾ ಸಮಾರಂಭಗಳನ್ನಿರಿಸಿಕೊಂಡಿದ್ದಾರೆ. 'ಯಕ್ಷರಮೇಶ-60ರ ಹೆಜ್ಜೆ'.. ನಾಮಾಂಕಿತದಲ್ಲಿ ನಡೆಯುವ ಸಮಾರಂಭದಲ್ಲಿ ರಮೇಶ ಶೆಟ್ಟಿ ಶಿಷ್ಯ ಬಳಗದ ವಿವಿಧ ಸಂಘಗಳಿಂದ 9 ಯಕ್ಷಗಾನ ಪ್ರದರ್ಶನ, ರಮೇಶ್ ಶೆಟ್ಟರು ಛಾಪೊತ್ತಿ ಮೆರೆದ ವೈವಿಧ್ಯ ಪಾತ್ರಗಳ 7 ಪ್ರದರ್ಶನವೂ ಸೇರಿದಂತೆ ಎರಡು ದಿನದ ಕಾರ್ಯಕ್ರಮದಲ್ಲಿ ಒಟ್ಟು 17 ಯಕ್ಷಗಾನಗಳು ಪ್ರದರ್ಶನಗೊಳ್ಳಲಿವೆ.
ಬಾಯಾರಿನಲ್ಲಿ ಗಡಿನಾಡ ಯಕ್ಷಹಬ್ಬ:
ಬಾಯಾರು ಪರಿಸರ ತೆಂಕಣ ಯಕ್ಷಗಾನದ ಕಾಶಿಯೆಂದೇ ಪ್ರಸಿದ್ಧ. ಇಲ್ಲಿನ ಸುತ್ತಮುತ್ತಲ ಊರುಗಳು ಯಕ್ಷಗಾನದ ಪ್ರಸಿದ್ಧ ಕಲಾವಿದರಿಂದಾಗಿ, ಕಲಾಮನೆತನಗಳಿಂದಾಗಿ ಖ್ಯಾತಿ ಪಡೆದಿವೆ. ಸುಮಾರು 30ಕ್ಕೂ ಅಧಿಕ ಯಕ್ಷಗಾನ ಸಂಘಸಂಸ್ಥೆಗಳಿರುವ ಈ ನಾಡು ಕೇರಳ-ಕರ್ನಾಟಕ ಗಡಿಯ ಯಕ್ಷಗಾನದ ಆಡುಂಬೊಲ. ವರ್ತಮಾನದಲ್ಲಿ ಈ ಪ್ರದೇಶದಲ್ಲಿ ಅಸಂಖ್ಯ ಶಿಷ್ಯರನ್ನು ಕಲಾವಿದರನ್ನಾಗಿ ರೂಪಿಸಿರುವ ರಮೇಶ ಶೆಟ್ಟರನ್ನು 60ರ ಹಬ್ಬದಲ್ಲಿ ಅಭಿನಂದಿಸುವ ಸಲುವಾಗಿ ಎರಡು ದಿನ ನಿರಂತರ ಹವ್ಯಾಸಿಗಳ ಯಕ್ಷಗಾನ ನಡೆಯುವುದು ಅಕ್ಷರಶಃ ಗಡಿನಾಡ ಯಕ್ಷಹಬ್ಬವಾಗಲಿದೆ.
25ರಂದು ಬೆಳಿಗ್ಗೆ 9.30ಕ್ಕೆ ಶ್ರೀ ಕಟೀಲಿನ ವೇ.ಮೂ. ಕಮಲಾದೇವಿ ಪ್ರಸಾದ ಅಸ್ರಣ್ಣರು ಉದ್ಘಾಟಿಸುವ ಸಮಾರಂಭದಲ್ಲಿ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಜೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಯಕ್ಷಗಾನ ಅಕಾಡೆಮಿ ಸದಸ್ಯ, ಹಿರಿಯ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಖ್ಯಾತ ಕಲಾವಿದ ಡಾ. ಶ್ರೀಧರ ಭಂಡಾರಿ ಪುತ್ತೂರು, ಹೆದ್ದಾರಿ ಶಾಲಾ ಪ್ರಬಂಧಕ ರಾಜೇಶ ನಿಡುವಜೆ ಅತಿಥಿಗಳಾಗಿ ಭಾಗವಹಿಸುವರು.
ಬಳಿಕ 11.30ರಿಂದ ಶ್ರೀ ಮೂಕಾಂಬಿಕಾ ಕಲಾಕೂಟ ಬೆರಿಪದವು ಇವರಿಂದ 'ಏಕಾದಶಿ ದೇವಿ ಮಹಾತ್ಮೆ' ಬಯಲಾಟ ಪ್ರದರ್ಶನವಾಗಲಿದೆ. ಮಧ್ಯಾಹ್ನ 1ರಿಂದ 1.30ರ ತನಕ ರಮೇಶ ಶೆಟ್ಟಿಯವರ ಜನಪ್ರಿಯ ವೇಷವಾದ 'ದಕ್ಷ'ನ ಪಾತ್ರವೈಶಿಷ್ಟ್ಯ ಪ್ರಸ್ತುತಿಯಾಗಲಿದೆ. ಅಪರಾಹ್ನ 1.30ರಿಂದ 3ರ ತನಕ ಶ್ರೀ ವಾರಾಹಿ ಯಕ್ಷಗಾನ ಕಲಾಸಂಘ ದಳಿಕುಕ್ಕು, ಬಾಯಾರು ಇವರಿಂದ 'ಶ್ರೀ ರಾಮದರ್ಶನ' ಯಕ್ಷಗಾನ ಪ್ರಸ್ತುತಿಯಾಗಲಿದೆ. ಸಂಜೆ 3ರಿಂದ ರಮೇಶ ಶೆಟ್ಟಿಯವರ 'ಗದಾಯುದ್ಧದ ಕೌರವ' ಪಾತ್ರ ವೈಶಿಷ್ಟ್ಯ ಪ್ರದರ್ಶನವಾಗಲಿದೆ. ಸಂಜೆ 4ರಿಂದ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘ ಸುದೆಂಬಳ ಇವರಿಂದ 'ರಕ್ತರಾತ್ರಿ' ಪ್ರಸಂಗದ ಬಯಲಾಟ, 5.30ರಿಂದ ರಮೇಶ ಶೆಟ್ಟರು ಹೊಸ ಆಯಾಮ ನೀಡಿದ 'ಜಾಂಬವ'ನ ಪಾತ್ರ ವೈಶಿಷ್ಟ್ಯ ಅನಾವರಣಗೊಳ್ಳಲಿದೆ.
ಸಂಜೆ 6.30ರಿಂದ 8ರ ತನಕ ಶ್ರೀವಿಠಲಶಾಸ್ತ್ರಿ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಕುರುಡಪದವು ಇದರ ವಿದ್ಯಾರ್ಥಿಗಳಿಂದ 'ದುಶ್ಶಾಸನ ವಧೆ' ಯಕ್ಷಗಾನ ಪ್ರದರ್ಶನ, ರಾತ್ರಿ 8ರಿಂದ ರಮೇಶ ಶೆಟ್ಟರ ಜನಪ್ರಿಯ ವೇಷ "ಕನಸು ಕಂಡ ಕಂಸ'ನ ಪಾತ್ರಾಭಿವ್ಯಕ್ತಿ ಪ್ರಸ್ತುತಿಯಾಗಲಿದೆ.
ಮೇ 26ರಂದು ಬೆಳಿಗ್ಗೆ 9.30ರಿಂದ ಮೊದಲಿಗೆ ರಮೇಶ ಶೆಟ್ಟರು ಛಪೊತ್ತಿದ ಪಾತ್ರವಾದ 'ಕಾರ್ತವೀರ್ಯ'ನ ಪ್ರಸ್ತುತಿಯಾಗಲಿದೆ. ಬಳಿಕ 10.30ರಿಂದ ಶ್ರೀ ಶಂಕರನಾರಾಯಣ ಯಕ್ಷಗಾನ ಕಲಾಸಂಘ ಕೋಳ್ಯೂರು ಇವರಿಂದ 'ಕುಮಾರ ವಿಜಯ' ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 12 ರಿಂದ ಬಾಯಾರು ಶ್ರೀ ಪಂಚಲಿಂಗೇಶ್ವರ ಬಾಲ ಯಕ್ಷಕಲಾವೃಂದ ಇವರಿಂದ 'ನರಕಾಸುರ ಮೋಕ್ಷ-ಗರುಡ ಗರ್ವಭಂಗ' ಯಕ್ಷಗಾನ ಪ್ರದರ್ಶನವಾಗಲಿದೆ. ಅಪರಾಹ್ನ 1.30ರಿಂದ 3ರ ತನಕ ಶ್ರೀ ಕುಮಾರಸ್ವಾಮಿ ಸಾಂಸ್ಕøತಿಕ ಪ್ರತಿಷ್ಠಾನ ಹಳುವಳ್ಳಿ , ಕಳಸ ಇವರಿಂದ "ವೀರ ಬಬ್ರುವಾಹನ' ಯಕ್ಷಗಾನ, ಬಳಿಕ 4ರ ತನಕ ರಮೇಶ ಶೆಟ್ಟಿಯವರ ಜನಪ್ರಿಯ ಪಾತ್ರವಾದ "ಕಂಹಾಸುರ'ನ ಪಾತ್ರ ವೈಶಿಷ್ಟ್ಯ ಅನಾವರಣಗೊಳ್ಳಲಿದೆ.
ಸಂಜೆ 4ರಿಂದ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಕಾಟಿಪಳ್ಳ, ಸುರತ್ಕಲ್ ಇವರಿಂದ 'ಜಾಂಬವತಿ ಕಲ್ಯಾಣ' ನ ಮತ್ತು 5.30ರಿಂದ ರಮೇಶ್ ಶೆಟ್ಟಿಯವರ 'ಶ್ರೀ ಶನೈಶ್ಚರ' ಪಾತ್ರದ ವೈಶಿಷ್ಟ್ಯ ಪ್ರಸ್ತುತಿಯಾಗಲಿದೆ.
ಸನ್ಮಾನ, ಅಭಿನಂದನಾ ಗ್ರಂಥ ಬಿಡುಗಡೆ:
ಬಳಿಕ 6ರಿಂದ ಅಭಿನಂದನಾ ಸಮಾರಂಭ ನಡೆಯಲಿದ್ದು ಶ್ರೀ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀ ಎಡನೀರು ಮಠದ ಜಯರಾಮ ಮಂಜತ್ತಾಯ ಎಡನೀರು ಅಧ್ಯಕ್ಷತೆ ವಹಿಸುವರು. ಎಸ್.ಎನ್ ಪಂಜಾಜೆ ಅಭಿನಂದನಾ ಭಾಷಣ ಮಾಡುವರು. ಪತ್ರಕರ್ತ ಎಂ.ನಾ. ಚಂಬಲ್ತಿಮಾರ್ ಸಂಪಾದಕತ್ವದಲ್ಲಿ ರೂಪುಗೊಂಡ ರಮೇಶ ಶೆಟ್ಟರ ಕಲಾಯಾನದ ಮೆಲುಕುಗಳನ್ನೊಳಗೊಂಡ 'ಸವ್ಯಸಾಚಿ' ಅಭಿನಂದನಾ ಗ್ರಂಥವನ್ನು ರಮೇಶರ ಮಾತೃಶ್ರೀ ಕಲ್ಯಾಣಿ ಐತಪ್ಪ ಶೆಟ್ಟಿ ಕುಳ್ಯಾರು ಬಿಡುಗಡೆಗೊಳಿಸುವರು. ಅತಿಥಿಗಳಾಗಿ ಹಿರಿಯ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಕುರಿಯ ಗಣಪತಿ ಶಾಸ್ತ್ರಿ, ಬೆಂಗಳೂರು ಹೈಕೋರ್ಟು ನ್ಯಾಯವಾದಿ ರಾಜೇಶ ರೈ ಕೇಪು, ಶಂಕರ ರೈ, ವೇದಶ್ರೀ ಪದ್ಮನಾಭ ಶರ್ಮ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಬದಿಯಾರು ದಿ. ಸುಬ್ರಾಯ ಭಟ್ಟರ ಸ್ಮರಣಾರ್ಥ ಅವರ ಪತ್ನಿ ಸಾವಿತ್ರಿ, ದಿ. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಸ್ಮರಣೆಯಲ್ಲಿ ಅವರ ಪತ್ನಿ ಶಾರದ, ಗುರು. ದಿ. ಬಾಯಾರು ಪ್ರಕಾಶ್ಚಂದ್ರ ರಾವ್ ಅವರ ಪತ್ನಿ ರಮಣಿ, ದಿ. ರಾಮಕೃಷ್ಣ ಭಟ್ ನಿಡುವಜೆ ಅವರ ಪತ್ನಿ ಪಾರ್ವತಿ ಅಮ್ಮ, ಹಾಗೂ ರಮೇಶರ ಕಲಾಯಾನಕ್ಕೆ ಪ್ರೋತ್ಸಾಹಕರಾದ ಭಾಗವತ ಕುರಿಯ ಗಣಪತಿ ಶಾಸ್ತ್ರಿ,ಮಾಂಬಾಡಿ ಸುಬ್ರಹ್ಮಣ್ಯ ಭಟ್, ದೇವಕಾನ ಕೃಷ್ಣ ಭಟ್, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಇವರುಗಳಿಗೆ ಗುರುವಂದನೆ ನಡೆಯಲಿದೆ.
ಸಮಾರೋಪ ಕಾರ್ಯಕ್ರಮದ ಬಳಿಕ ರಮೇಶ ಶೆಟ್ಟರ ಹಿರಿಯ ಶಿಷ್ಯಂದಿರಿಂದ ನೂತನ ಪ್ರಸಂಗದ ಬಯಲಾಟ ನಡೆಯಲಿದೆ. ಎರಡು ದಿನಗಳ ಪರ್ಯಂತ ನಡೆಯುವ ಯಕ್ಷಹಬ್ಬದ ಹಿಮ್ಮೇಳದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರು ಪಾಲ್ಗೊಳ್ಳುವರು.