ಬರ್ಲಿನ್: ಭಾರತದಲ್ಲಿ ವಾರ್ಷಿಕ ಮದ್ಯಸೇವನೆ ಪ್ರಮಾಣ 7 ವರ್ಷಗಳಲ್ಲಿ ಶೇ.38 ರಷ್ಟು ಏರಿಕೆಯಾಗಿದ್ದರೆ, ಜಾಗತಿಕವಾಗಿ 1990 ರಿಂದ ಶೇ.70 ರಷ್ಟು ಏರಿಕೆಯಾಗಿದೆ.
ಲ್ಯಾನ್ಸೆಟ್ ಜರ್ನಲ್, 1990-2017 ವರೆಗೆ 189 ರಾಷ್ಟ್ರಗಳಲ್ಲಿದ್ದ ಮದ್ಯಸೇವನೆಯ ಪ್ರಮಾಣದ ಕುರಿತು ಅಧ್ಯಯನ ನಡೆಸಿ ಮೇ.08 ರಂದು ಪ್ರಕಟಿಸಿರುವ ವರದಿಯ ಪ್ರಕಾರ ಹಾನಿಕಾರಕ ಮದ್ಯಸೇವನೆ ತಡೆಗೆ 2030 ರ ವೇಳೆಗೆ ತಲುಪಬೇಕಿರುವ ಗುರಿಯನ್ನು ಮುಟ್ಟುವ ಪರಿಸ್ಥಿತಿಯಲ್ಲಿ ಜಗತ್ತು ಇಲ್ಲ ಎಂದು ಹೇಳಿದೆ. ಭಾರತದಲ್ಲಿ 2010-2017 ವರೆಗೆ ಪ್ರತಿ ವರ್ಷ 4.3-5.9 ಲೀಟರ್ ವರೆಗೆ ಒಟ್ಟಾರೆ ಶೇ.38 ರಷ್ಟು ಮದ್ಯ ಸೇವನೆಯ ಪ್ರಮಾಣ ಏರಿಕೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇದೇ ಅವಧಿಯಲ್ಲಿ ಅಮೆರಿಕಾದಲ್ಲಿ 9.3-9.8 ಲೀಟರ್ ಗಳು ಹಾಗೂ ಚೀನಾದಲ್ಲಿ ಪ್ರತಿ ವರ್ಷ 7.1-7.4 ಲೀಟರ್ ಗಳಷ್ಟು ಮದ್ಯ ಸೇವನೆ ಏರಿಕೆಯಾಗಿದೆಯಂತೆ.
ಜನಸಂಖ್ಯೆ ಜೊತೆಗೆ ಮದ್ಯಸೇವನೆ ಪ್ರಮಾಣ ಏರಿಕೆಯಾಗುತ್ತಿರುವುದರ ಪರಿಣಾಮ 1990 ರಿಂದ 2017 ವರೆಗೆ ಜಾಗತಿಕವಾಗಿ ಮದ್ಯಸೇವನೆಯ ಪ್ರಮಾಣ ಒಟ್ಟಾರೆ ಶೇ.70 ನ್ನು ದಾಟಿದೆ. ಕೆಳ ಮಧ್ಯಮ ಹಾಗೂ ಮಧ್ಯಮ ಆದಾಯವಿರುವ ದೇಶಗಳಲ್ಲಿ ಮದ್ಯಸೇವನೆ ಪ್ರಮಾಣ ಹೆಚ್ಚಿದ್ದರೆ, ಹೆಚ್ಚು ಆದಾಯವಿರುವ ದೇಶಗಳಲ್ಲಿನ ಮದ್ಯಸೇವನೆ ಪ್ರಮಾಣ ಸ್ಥಿರವಾಗಿದೆ.
2030 ರ ವೇಳೆಗೆ ಒಟ್ಟಾರೆ ಇರುವ ವಯಸ್ಕರ ಪೈಕಿ ಅರ್ಧದಷ್ಟು ಮಂದಿ ಮದ್ಯಕ್ಕೆ ದಾಸರಾಗಲಿದ್ದಾರೆ, ಶೇ.23 ರಷ್ಟು ಮಂದಿ ಕನಿಷ್ಟ ತಿಂಗಳಿಗೊಮ್ಮೆ ಒಂದೇ ಸಮನೆ ಮದ್ಯ ಸೇವನೆ ಮಾಡುವವರು ಸಿಗುತ್ತಾರೆ ಎನ್ನುತ್ತಿದ್ದಾರೆ ಸಂಶೋಧಕರು.