ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳವಳಕಾರಿಯಾಗಿ ತೀವ್ರಗೊಂಡಿರುವ ಜಲಕ್ಷಾಮಕ್ಕೆ ಸಂಬಂಧಪಟ್ಟವರು ಯಾವುದೇ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯಿಸುತ್ತಿರುವುದನ್ನು ಖಂಡಿಸಿ ಪೈವಳಿಕೆ ಪಂಚಾಯತಿ ಬಿಜೆಪಿ ಸಮಿತಿಯ ನೇತೃತ್ವಲ್ಲಿ ಮಂಗಳವಾರ ಪ್ರತಿಭಟನಾ ಧರಣಿ ನಡೆಯಿತು.
ಭಾರತೀಯ ಜನತಾ ಯುವಮೋರ್ಚಾದ ರಾಜ್ಯ ನೇತಾರ ಪಿ.ಆರ್.ಸುನಿಲ್ ಧರಣಿಯನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜನಸಾಮಾನ್ಯರ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಜಲ ಪೂರೈಕೆಯಲ್ಲಿ ಪೈವಳಿಕೆ ಗ್ರಾ.ಪಂ. ಆಡಳಿತ ಸಮಿತಿ ಬೇಜವಾಬ್ದಾರಿಯಿಂದ ವರ್ತಿಸಿದೆ. ಜಿಲ್ಲಾಡಳಿತದಿಂದ ದೊರಕಿದ ಬರಪರಿಹಾರ ನಿಧಿಯನ್ನಾಗಲಿ, ಗ್ರಾ.ಪಂ. ನ ನಿಧಿಯನ್ನಾಗಲಿ ಬಳಸುವಲ್ಲಿ ತೋರಿಸುತ್ತಿರುವ ಅನಾಸ್ಥೆಯ ಕಾರಣ ಇಂದು ನೀರಿನ ಲಭ್ಯತೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ತಿಳಿಸಿದರು. ಹಿಂದಿನ ಬಿಜೆಪಿ ಆಡಳಿತ ಸಮಿತಿ ಜಾರಿಗೊಳಿಸಲು ಉದ್ದೇಶಿಸಿದ್ದ ಜಲನಿಧಿ ಯೋಜನೆಯನ್ನು ರಾಜಕೀಯ ಕಾರಣಗಳಿಂದ ಸಮರ್ಪಕವಾಗಿ ಜಾರಿಗೊಳಿಸದೆ ಗ್ರಾ.ಪಂ. ಈಗಿನ ಆಡಳಿತ ಸಮಿತಿ ಜನವಂಚನೆ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. ಶೀಘ್ರ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.
ಬಿಜೆಪಿ ಪಂಚಾಯತಿ ಘಟಕಾಧ್ಯಕ್ಷ ಸದಾಶಿವ ಚೇರಾಲು ಅಧ್ಯಕ್ಷತೆ ವಹಿಸಿದ್ದರು. ಪ್ರಭಾರಿ ಹರಿಶ್ಚಂದ್ರ ಮಂಜೇಶ್ವರ, ಮುಖಂಡರಾದ ಜಯಲಕ್ಷ್ಮೀ ಭಟ್, ಎ.ಕೆ.ಕಯ್ಯಾರು, ಪ್ರಸಾದ್ ರೈ ಕಯ್ಯಾರು, ಗ್ರಾ.ಪಂ. ಪ್ರತಿನಿಧಿಗಳಾದ ಕಿಶೋರ್ ನಾಯಕ್, ಗಣೇಶ್, ತಾರಾ ವಿ.ಶೆಟ್ಟಿ, ರಾಜೀವಿ.ಪಿ.ರೈ ಉಪಸ್ಥಿತರಿದ್ದರು. ಬಿಜೆಪಿ ಪಂಚಾಯತಿ ಘಟಕದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಸ್ವಾಗತಿಸಿ, ಯುವಮೋರ್ಚಾ ಮುಖಂಡ ಸಂತೋಷ್ ಸಜಂಕಿಲ ವಂದಿಸಿದರು.