ನವದೆಹಲಿ: ಲೋಕಪಾಲ, ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರು ಗುರುವಾರ ಲೋಕಪಾಲ ವೆಬ್ ಸೈಟ್ ಅನ್ನು ಲೋಕಾರ್ಪಣೆ ಮಾಡಿದರು.
ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ ಐ ಸಿ) ಈ ಜಾಲತಾಣವನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ಲೋಕಪಾಲದ ಕಾರ್ಯಾಚರಣೆ ಕುರಿತ ಮೂಲ ಮಾಹಿತಿ ಲಭ್ಯವಿದೆ. ವೆಬ್ ವಿಳಾಸ ಲೋಕ್ಪಾಲ್ ಡಾಟ್ ಗೌ ಡಾಟ್ ಇನ್ http ://lokpal.gov.in
ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ 2013 ರ ಅಡಿ ಸ್ಥಾಪಿತವಾದ ಮೊದಲ ಸ್ವತಂತ್ರ ಸಂಸ್ಥೆ ಲೋಕಪಾಲ. ಈ ಕಾಯ್ದೆ ವ್ಯಾಪ್ತಿಯ ಸಾರ್ವಜನಿಕ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳ ವಿಚಾರಣೆ ಸಂಬಂಧ ಈ ಸಂಸ್ಥೆ ರಚಿಸಲಾಗಿದೆ.
ಪ್ರಸ್ತುತ ಲೋಕಪಾಲ ಕಚೇರಿ ತಾತ್ಕಾಲಿಕವಾಗಿ ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಹೋಟೆಲ್ ಅಶೋಕಾದಿಂದ ಕಾರ್ಯನಿರ್ವಹಿಸುತ್ತಿದೆ. ನಿಯಮಗಳನ್ನು ಪ್ರಕಟಿಸುವ ವಿಧಾನ, ದೂರುಗಳನ್ನು ಸ್ವೀಕರಿಸುವ ವಿಧಾನ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ವರ್ಷದ ಏಪ್ರಿಲ್ 16 ರವರೆಗೆ ಸ್ವೀಕೃತವಾದ ದೂರುಗಳನ್ನು ಲೋಕಾಯುಕ್ತ ವಿಲೇವಾರಿ ಮಾಡಿದೆ. ನಂತರ ಸ್ವೀಕೃತವಾದ ದೂರುಗಳು ಪರಿಶೀಲನೆ ಹಂತದಲ್ಲಿವೆ.
ದೇಶದ ಮೊದಲ ಲೋಕಪಾಲರಾಗಿ ನೇಮಕಗೊಂಡ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರಿಗೆ ರಾಷ್ಟ್ರಪತಿಗಳು ಕಳೆದ ಮಾರ್ಚ್ 23ರಂದು ಪ್ರಮಾಣ ವಚನ ಬೋಧಿಸಿದ್ದರು.
ಲೋಕಪಾಲ ಸದಸ್ಯರಾಗಿ ನಾಲ್ವರು ನ್ಯಾಯಾಂಗ ಮತ್ತು ನಾಲ್ವರು ನ್ಯಾಯಾಂಗೇತರ ಸದಸ್ಯರನ್ನು ಈಗಾಗಲೇ ಸರ್ಕಾರ ನೇಮಕ ಮಾಡಿದೆ.