ಬದಿಯಡ್ಕ: ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ಪಳ್ಳತ್ತಡ್ಕ ಸೇತುವೆ ಶಿಥಿಲಗೊಳ್ಳುತ್ತಿದ್ದು, ಆತಂಕ ಸೃಷ್ಟಿಗೆ ಕಾರಣವಾಗಿದೆ. ಕರ್ನಾಟಕದ ಪುತ್ತೂರು ಸಂಪರ್ಕಿಸಲು ಬದಿಯಡ್ಕ ರಸ್ತೆಯಲ್ಲಿ ಸಾಗುವ ಸಂದರ್ಭದಲ್ಲಿ ಸಿಗುವ ಪಳ್ಳತ್ತಡ್ಕದಲ್ಲಿರುವ ಈ ಸೇತುವೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಸೇತುವೆಯ ಮೇಲ್ಭಾಗದ ರಸ್ತೆಯಲ್ಲಿ ಹೊಂಡಗುಂಡಿ ನಿರ್ಮಾಣವಾಗಿದ್ದು, ಸುಗಮ ವಾಹನ ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ. ಚಾಲಕರು ಸಾಹಸದಿಂದ ವಾಹನ ಚಲಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಚೆರ್ಕಳ-ಕಲ್ಲಡ್ಕ ರಸ್ತೆಯ ದುರಸ್ತಿಗಾಗಿ ನಡೆದ ನಿರಂತರ ಹೋರಾಟದ ಪರಿಣಾಮವಾಗಿ ಈ ರಸ್ತೆ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು ನಿಧಾನಗತಿಯಲ್ಲಿ ಸಾಗುತ್ತಿದೆ. ಈ ರಸ್ತೆಯಲ್ಲಿ ಸಿಗುವ ಮುಖ್ಯ ಸೇತುವೆಯೇ ಪಳ್ಳತ್ತಡ್ಕ ಸೇತುವೆ. ಈ ಸೇತುವೆ ಅತೀ ದೊಡ್ಡ ಸೇತುವೆಯೂ ಆಗಿದೆ. ಸೇತುವೆ ಮೇಲಿನ ರಸ್ತೆ ಅತೀ ಹೆಚ್ಚು ಹದಗೆಟ್ಟಿದೆ. ಸೇತುವೆ ಮೇಲಿನ ರಸ್ತೆಯಲ್ಲಿ ಹೊಂಡಗುಂಡಿ ನಿರ್ಮಾಣವಾಗಿದ್ದು ಜಲ್ಲಿ ಮೇಲೆದ್ದು, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ದಿನ ನಿತ್ಯ ನೂರಾರು ವಾಹನಗಳು ಸಾಗುತ್ತಿದ್ದು, ಘನ ವಾಹನ ಸಂಚರಿಸುವ ಸಂದರ್ಭದಲ್ಲಿ ಸೇತುವೆಯ ಅಡಿ ಭಾಗದ ಸಿಮೆಂಟ್‍ನ ಹಾಳೆಗಳು ಉದುರಿ ಬೀಳುತ್ತಿವೆ. ಸೇತುವೆಯ ಕಾಂಕ್ರೀಟ್ ಸಿಮೆಂಟ್ ಇದೇ ರೀತಿ ಉದುರಿ ಬೀಳುವುದು ಮುಂದುವರಿದರೆ ಸೇತುವೆಗೆ ಅಪಾಯದ ಭೀತಿ ಎದುರಾಗಲಿದೆ. ಸೇತುವೆಯ ಪಿಲ್ಲರ್‍ಗಳಲ್ಲಿ ಅಲ್ಲಲ್ಲಿ ಸಿಮೆಂಟ್ ಎದ್ದು ಹೋಗಿ ಕಬ್ಬಿಣದ ರಾಡ್‍ಗಳು ಗೋಚರಿಸುತ್ತಿವೆ. ಸೇತುವೆಯ ಮೇಲ್ಭಾಗವೂ ಶೋಚನೀಯ ಸ್ಥಿತಿ ಯಲ್ಲಿದ್ದು ಹೊಂಡ ಬಿದ್ದಿರುವ ಅಲ್ಲಲ್ಲಿ ಕಬ್ಬಿಣದ ರಾಡ್‍ಗಳು ಕಾಣಿಸುತ್ತಿವೆ. ಈ ಕಬ್ಬಿಣದ ರಾಡ್‍ಗಳು ಮುಂದಿನ ದಿನಗಳಲ್ಲಿ ತುಕ್ಕು ಹಿಡಿದು ಅಪಾಯಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ. ಸೇತುವೆಯ ಒಂದು ಭಾಗ ಯಾವುದೇ ಕ್ಷಣ ಕುಸಿದು ಬೀಳಬ ಹುದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪುತ್ತೂರಿಗೆ ಸಾಗುವಾಗ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಅಗಲ ಕಿರಿದಾದ ಸೇತುವೆಗಳಿವೆ. ಆದರೆ ಅವುಗಳು ಇನ್ನೂ ಗಟ್ಟಿಮುಟ್ಟಾಗಿವೆ. ಆದರೆ ಹೊಸ ತಾಂತ್ರಿಕತೆ ಬಳಸಿ ನಿರ್ಮಿಸಿದ ಪಳ್ಳತ್ತಡ್ಕ ಸೇತುವೆ ಶಿಥಿಲಗೊಳ್ಳುತ್ತಿರುವುದು ಆತಂಕಕಾರಿಯಾಗಿದೆ.
ಶಾಲಾರಂಭಕ್ಕೆ ಭೀತಿ:
ಶಾಲಾರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಸೇತುವೆಯ ಮೂಲಕ ಹಲವಾರು ಶಾಲಾ ವಾಹನಗಳು ಸಂಚರಿಸುತ್ತವೆ. ಜೊತೆಗೆ ಸಾರಿಗೆ ಇಲಾಖಾ ಬಸ್ ಮತ್ತು ಖಾಸಗೀ ಬಸ್ ಗಳ ಮೂಲಕವೂ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಆದರೆ ಹದಗೆಟ್ಟು ಈಗಲೋ ಆಗಲೋ ಕುಸಿಯುವ ಭೀತಿಯಲ್ಲಿರುವ ಸೇತುವೆಯ ಕಾರಣ ವಿದ್ಯಾರ್ಥಿಗಳ ಹೆತ್ತವರು ಹೆಚ್ಚು ಆತಂಕಿತರಾಗಿದ್ದಾರೆ. ಅತಿ ವೇಗದಲ್ಲಿ ಓಡಾಡುವ ಶಾಲಾ ವಾಹನಗಳ ಮೂಲಕ ಮಕ್ಕಳನ್ನು ಕಳಿಸಲು ಹೆತ್ತವರು ಹಿಂದೇಟು ಹಾಕುವ ಸ್ಥಿತಿ ಕಂಡುಬಂದಿದೆ.
ಆಮೆಯನ್ನೂ ಮೀರಿಸುವ ವೇಗದ ಕಾಮಗಾರಿ:
ಚೆರ್ಕಳ ಕಲ್ಲಡ್ಕ ಅಂತರಾಜ್ಯ ಹೆದ್ದಾರಿಯ ಅಡ್ಕಸ್ಥಳದಿಂದ ಚೆರ್ಕಳವರೆಗಿನ ರಸ್ತೆಯ ಅಗಲೀಕರಣ ಮತ್ತು ಮರು ಡಾಮರೀಕರಣದ ಕಾಮಗಾರಿ ಆರಂಭಗೊಂಡು ಎರಡು ತಿಂಗಳಿಗಿಂತಲೂ ಹೆಚ್ಚು ಕಾಲವಾದರೂ ಕಾಮಗಾರಿ ಆಮೆ ನಡಿಗೆಯನ್ನೂ ಮೀರಿಸುವಂತೆ ಕುಂಟುತ್ತಾ ಸಾಗಿದೆ. ದಿನವೊಂದರಲ್ಲಿ ಕನಿಷ್ಠ ಮೂರು ಕಿಲೋಮೀಟರ್ ಗಳಷ್ಟಾದರೂ ಕಾಮಗಾರಿ ಪ್ರಗತಿಯಾಗಬೇಕಿರುವಲ್ಲಿ 250 ಮೀಟರ್ ದೂರದ ಕಾಮಗಾರಿಯೂ ನಡೆಯದಿರುವುದು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಕಾಮಗಾರಿಯ ಟೆಂಡರ್ ವಹಿಸಿರುವ ಕುದ್ರೋಳಿ ಕನ್ಸ್‍ಸ್ಟ್ರಕ್ಷನ್ ಈ ಮೊದಲೇ ಅಪೂರ್ಣ ಕಾಮಗಾರಿಗಳು ಮತ್ತು ಕಳಪೆ ಕಾಮಗಾರಿಯ ಮೂಲಕ ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಯಾಗಿದ್ದು, ಈ ಕಾರಣದಿಂದ ಕಾಮಗಾರಿಗಳು ಸಮರ್ಪಕವಾಗಿ ನಿರೀಕ್ಷಿತ ಮಟ್ಟ ತಲಪಲಾರದೆಂಬ ಮಾತುಗಳು ಕೇಳಿಬಂದಿದೆ.
ಅಭಿಮತ:
ಪಳ್ಳತ್ತಡ್ಕ ಸೇತುವೆಯ ತುರ್ತು ದುರಸ್ಥಿ ಮುಂದಿನ ಹತ್ತು ದಿನದೊಳಗೆ ಆಗಲೇ ಬೇಕು. ಇತರೆಡೆ ಇದೀಗ ಮುಂದುವರಿದಿರುವ ರಸ್ತೆ ಕಾಮಗಾರಿ ಯಾವ ಹಂತದಲ್ಲೇ ಇದ್ದರೂ, ಪಳ್ಳತ್ತಡ್ಕ ಸೇತುವೆಯನ್ನು ಪ್ರತ್ಯೇಕ ಪರಿಗಣನೆಯಡಿ ದುರಸ್ಥಿಗೊಳಿಸದಿದ್ದರೆ ಮುಂಗಾರು ಮಳೆಯೊಂದಿಗೆ ಕುಸಿದು ಬೀಳದಿರದು. ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟವರಿಗೆ ಪ್ರತ್ಯೇಕ ಮನವಿ ನೀಡಿರುತ್ತಾರೆ.
ಹೆಸರು ಹೇಳಲಿಚ್ಚಿಸದ ಪಳ್ಳತ್ತಡ್ಕದ ಸ್ಥಳೀಯ ವ್ಯಾಪಾರಿ.