ಇಸ್ಲಾಮಾಬಾದ್: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಅತ್ತ ಪಾಕಿಸ್ತಾನ ತನ್ನ ಶಾಹೀನ್ 2 ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ನಡೆಸಿ ಭಾರತದ ನೂತನ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ.
ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಬಿಜೆಪಿ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 350ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಸರ್ಕಾರ ನಡೆಸುವು ಖಚಿತವಾಗಿದ್ದು, ಇದರ ಬೆನ್ನಲ್ಲೇ ನೂತನ ಭಾರತ ಸರ್ಕಾರಕ್ಕೆ ನೆರೆಯ ಮತ್ತು ಸಾಂಪ್ರದಾಯಿಕ ಎದುರಾಳಿ ದೇಶ ಪಾಕಿಸ್ತಾನ ಪರೋಕ್ಷ ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ಸೇನೆ ಇಂದು ತನ್ನ ಶಾಹೀನ್ 2 ಅಣ್ವಸ್ತ್ಪ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿದ್ದು, ಆ ಮೂಲಕ ತನ್ನ ಮೇಲೆ ದಾಳಿಗೆ ಮುಂದಾದರೆ ತಾನು ಅಣ್ವಸ್ತ್ರಗಳ ಮೂಲಕ್ಕ ಉತ್ತರ ನೀಡುತ್ತೇನೆ ಎಂದು ಪರೋಕ್ಷ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಅವರು ಟ್ವೀಟ್ ಮಾಡಿದ್ದು, 1500 ಕಿ,ಮೀ ಸಾಮಥ್ರ್ಯದ ಶಾಹೀನ್ 2 ಅಣ್ವಸ್ತ್ಪ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಗಿದ್ದು, ಪಾಕಿಸ್ತಾನದ ಭದ್ರತಾ ಸಾಮಥ್ರ್ಯ ಮತ್ತಷ್ಟು ಹೆಚ್ಚಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಭಾರತದ ಚುನಾವಣೆ ಕುರಿತಂತೆ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್ ಅವರು, ಭಾರತ ಲೋಕಸಭಾ ಚುನಾವಣಾ ಫಲಿತಾಂಶವನ್ನು ಪಾಕಿಸ್ತಾನ ಲಘುವಾಗಿ ಪರಿಗಣಿಸಬಾರದು. ಶಾಹೀನ್ 2 ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ಭಾರತಕ್ಕೆ ಪರೋಕ್ಷ ಎಚ್ಚರಿಕೆ ಎಂದು ಹೇಳಿದ್ದಾರೆ.