ಕಾಸರಗೋಡು: ಭಾರೀ ಕುತೂಹಲ ಮೂಡಿಸಿದ 17ನೇ ಲೋಕಸಭಾ ಚುನಾವಣೆಯಲ್ಲಿ ಕೇರಳ ಆಶ್ಚರ್ಯಕರ ರೀತಿಯ ಫಲಿತಾಂಶದ ಮೂಲಕ ರಾಷ್ಟ್ರಮಟ್ಟದಲ್ಲೇ ಗಮನಿಸಲ್ಪಟ್ಟಿದೆ. ಅಸಂಖ್ಯ ಕೋಟಿ ಶ್ರದ್ಧಾಳುಗಳ ಶ್ರೀ ಶಬರಿಮಲೆ ಕ್ಷೇತ್ರದ ಪಾರಂಪರಿಕ ನಂಬಿಕೆಗಳಿಗೆ ಕೊಳ್ಳಿ ಇಡಲು ಹವಣಿಸಿ ಅನೇಕ ಶ್ರದ್ಧಾಳುಗಳ ನೋವಿಗೆ ಕಾರಣವಾದ ರಾಜ್ಯ ಆಡಳಿತ ಚುಕ್ಕಾಣಿ ಹಿಡಿದಿರುವ ಎಡರಂಗವನ್ನು ಸಂಪೂರ್ಣ ಮಣಿಸಿದ ಪ್ರಜಾಕೋಟಿ ಯುಡಿಎಫ್ ಅಭ್ಯರ್ಥಿಗಳನ್ನು ಬಹುಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ದಾಖಲೆ ಬರೆದಿದ್ದಾರೆ. ಜೊತೆಗೆ ಗಡಿನಾಡು ಕಾಸರಗೋಡನ್ನು ಕಳೆದ ಹಲವು ದಶಕಗಳಿಂದ ತಮ್ಮ ಅಂಕೆಯಲ್ಲಿರಿಸಿ ಗೆಲುವಿನ ಏಕ ಸವಾರರು ನಾವೇ ಎನ್ನುತ್ತಿದ್ದ ಎಡರಂಗ ತನ್ನ ಸ್ಥಾನ ಕಳಕೊಂಡು ಯುಡಿಎಫ್‍ನ ನಿಚ್ಚಳ ಗೆಲುವಿಗೆ ಕಾರಣವಾಗಿರುವುದು ಹೊಸ ಅಲೆಯೊಂದನ್ನು ಸೃಷ್ಟಿಸಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಕಾಂಗ್ರೆಸ್‍ನ ರಾಜ್‍ಮೋಹನ್ ಉಣ್ಣಿತ್ತಾನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಎಲ್‍ಡಿಎಫ್‍ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಕಸಿದು ಕೊಂಡಿರುವ ಉಣ್ಣಿತ್ತಾನ್ ತನ್ನ ಸಮೀಪದ ಪ್ರತಿಸ್ಪರ್ಧಿ ಎಲ್‍ಡಿಎಫ್‍ನ ಸಿಪಿಎಂ ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್ ಅವರನ್ನು 40438 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಈ ಮೂಲಕ ಎಲ್‍ಡಿಎಫ್‍ನ ಅಧಿಪತ್ಯವನ್ನು ಕೊನೆಗೊಳಿಸಿದ್ದಾರೆ. ಉಣ್ಣಿತ್ತಾನ್ 474961 ಮತಗಳನ್ನು ಪಡೆದುಕೊಂಡಿದ್ದರೆ, ಸಿಪಿಎಂ ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್ 434523 ಮತಗಳನ್ನು ಪಡೆದುಕೊಂಡಿದ್ದಾರೆ. ಎನ್‍ಡಿಎ ಅಭ್ಯರ್ಥಿ ಬಿಜೆಪಿಯ ರವೀಶ ತಂತ್ರಿ ಕುಂಟಾರು 1,76,049 ಮತಗಳನ್ನು ಪಡೆದು ತೃತೀಯ ಸ್ಥಾನದಲ್ಲಿ ತೃಪ್ತಿ ಪಡಬೇಕಾಯಿತು.
ಇತರ ಅಭ್ಯರ್ಥಿಗಳಾದ ಬಿಎಸ್‍ಪಿಯ ನ್ಯಾಯವಾದಿ ಬಶೀರ್ ಆಲಡಿ 1910 ಸ್ವತಂತ್ರ ಅಭ್ಯರ್ಥಿಗಳಾದ ಗೋವಿಂದನ್ ಅಲಿಂತಜೆ 2670, ಕೆ.ನರೇಂದ್ರ ಕುಮಾರ್ 1054, ರಣದೀವನ್ ಆರ್.ಕೆ. 1478, ರಮೇಶ್ ಬಂದಡ್ಕ 1711, ಸಾಜಿ 1278 ಮತಗಳನ್ನು ಪಡೆದುಕೊಂಡಿದ್ದಾರೆ. 4417 ಮತಗಳು ನೋಟದಲ್ಲಿ ದಾಖಲಾಗಿದೆ.
2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ಸಿ.ಪಿ.ಎಂ. ನ ಪಿ.ಕರುಣಾಕರನ್ 3,84,964 ಮತಗಳನ್ನು ಪಡೆದು 6921 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‍ನ ಟಿ.ಸಿದ್ದಿಕ್ 378043 ಮತಗಳನ್ನು, ಬಿ.ಜೆ.ಪಿ.ಯ ಕೆ.ಸುರೇಂದ್ರನ್ 172826 ಮತಗಳನ್ನು ಪಡೆದಿದ್ದರು.