ಕುಂಬಳೆ: ಜಿಲ್ಲೆ ಅನುಭವಿಸುತ್ತಿರುವ ಕುಡಿಯುವ ನೀರಿನ ತೀವ್ರ ಬರದ ಶಾಶ್ವತ ಪರಿಹಾರಕ್ಕೆ ಮತ್ತು ವಿವಿಧೋದ್ದೇಶ ಗುರಿಯಾಗಿಸಿ ಜಿಲ್ಲಾಡಳಿತೆ ರಚಿಸಿರುವ ಬಿದಿರು(ಬ್ಯಾಂಬೂ) ಕ್ಯಾಪಿಟಲ್ ಯೋಜನೆಯ ಚಟುವಟಿಕೆಗಳು ಪ್ರಗತಿ ಸಾಧಿಸುತ್ತಿವೆ.
ಈ ಯೋಜನೆ ಪೂರ್ಣಗೊಳ್ಳುವುದರೊಂದಿಗೆ ಜಿಲ್ಲೆ ದಕ್ಷಿಣ ಭಾರತದ ಬಿದಿರು ರಾಜಧಾನಿಯಾಗಿ ಪರಿವರ್ತನೆಗೊಳ್ಳಲಿದೆ.
ಮೊದಲ ಹಂತದಲ್ಲಿ ಯೋಜನೆಯ ಅಂಗವಾಗಿ ಕಾಸರಗೋಡು, ಮಂಜೇಶ್ವರ ಬ್ಲಾಕ್ ಗಳಲ್ಲಿ ಬಿದಿರು ಸಸಿಗಳನ್ನು ಸಿದ್ಧಪಡಿಸಲಾಗುತ್ತಿದೆ. 13 ಗ್ರಾಮಪಂಚಾಯತ್ ಗಳಲ್ಲಿ ಸಸಿಗಳನ್ನು ನೆಡುವ ಗುಂಡಿ ನಿರ್ಮಾಣ ತ್ವರಿತಗತಿಯಲ್ಲಿ ನಡೆದುಬರುತ್ತಿದೆ. ಈ ಯೋಜನೆ ಸಂಬಂಧ ಪೈವಳಿಕೆ ಗ್ರಾಮಪಂಚಾಯತಿಯಲ್ಲಿ ಆರಂಭಿಸಲಾದ ಜಿಲ್ಲೆಯ ಮೊದಲ ಬಿದಿರು
ನರ್ಸರಿಯಲ್ಲಿ ಈಗಾಗಲೇ ಹತ್ತು ಸಾವಿರ ಸಸಿಗಳನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಈ ಸಸಿಗಳು ಎರಡು ಫೀಟ್ ಉದ್ದ ಬೆಳೆದಿವೆ. ಅಗತ್ಯವಿರುವ ಉಳಿದ ಸಸಿಗಳು ಮೇ ತಿಂಗಳಕೊನೆಯಲ್ಲಿ ತಯಾರಾಗಲಿವೆ.
ಗ್ರಾಮ ಪಂಚಾಯತಿಯ 19 ವಾರ್ಡ್‍ಗಳಲ್ಲಿ ತಲಾ 1300 ಸಸಿಗಳಂತೆ 24,700 ಬಿದಿರು ಸಸಿಗಳನ್ನು ನೆಡಲಾಗುವುದು. 150 ಮಂದಿ ಉದ್ಯೋಗ ಖಾತರಿ ಕಾರ್ಮಿಕರು ಸಸಿ ನೆಡುವಿಕೆಯ ಹೊಂಡ (ಗುಳಿ) ತೋಡುವ ಕಾಯದಲ್ಲಿದ್ದಾರೆ. ಈ ಹೊಂಡಗಳಲ್ಲಿ ಹಾಕಲಾಗುವ ಜೈವಿಕ ಗೊಬ್ಬರ ನಿರ್ಮಾಣಕ್ಕಾಗಿ ಪಂಚಾಯತಿಯ 8 ಗೊಬ್ಬರ ಗುಂಡಿಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಜೈವಿಕ ತ್ಯಾಜ್ಯ ಮತ್ತು ಸೆಗಣಿ ಬೆರೆಸಿ ಈ ವರ್ಷ ಏಪ್ರಿಲ್ ನಲ್ಲಿ ಗೊಬ್ಬರ ನಿರ್ಮಾಣ ಆರಂಭಿಸಲಾಗಿದೆ.
ಯೋಜನೆಯ ಅಂಗವಾಗಿ ಜಿಲ್ಲೆಯಲ್ಲಿ ಒಟ್ಟು 3 ಲಕ್ಷ ಬಿದಿರು ಸಸಿಗಳನ್ನು ನಡೆಲಾಗುವುದು. ಗುಣಾಂಶ ಅಧಿಕವಾಗಿರುವ ಭಾರತದಲ್ಲಿ ಸರ್ವಸಾಮಾನ್ಯವಾಗಿರುವ "ಕಲ್ಲನ್ ಬಿದಿರು"ಸಸಿಗಳನ್ನು ಈ ಯೋಜನೆಗಾಗಿ ಬಳಸಲಾಗುವುದು. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡು ಜಿಲ್ಲೆಯಲ್ಲಿ ಉದ್ದಿಮೆ ವಲಯ ಕಡಿಮೆಯಾಗಿದ್ದು, ಕಂದಾಯ ಜಾಗಗಳು ಬರಡಾಗಿವೆ. ಒಣಗಿದ ಸ್ಥಿತಿಯಲ್ಲಿರುವ ಇಂಥಾ ಲ್ಯಾಟರೈಟ್ ಭೂಪ್ರದೇಶವನ್ನು ಹಸುರುಗೊಳಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳು ಸಿದ್ಧವಾಗುತ್ತಿವೆ. ಹರಿದುಹೋಗುವ ನೀರನ್ನು ತಡೆದು ಮಣ್ಣಿನಡಿ ರವಾನಿಸುವ ನಿಟ್ಟಿನಲ್ಲಿ ಬಿದಿರು ಸಸಿಗಳು ಪ್ರಧಾನವಾಗಿವೆ.
ಅನೇಕ ನದಿಗಳಿದ್ದೂ ಬೇಸಗೆಯಲ್ಲಿ ಕಡು ನೀರಿನ ಬರ ಅನುಭವಿಸುವ ಜಿಲ್ಲೆಯ ಪುನಶ್ಚೇತನಕ್ಕೆ ಈ ಯೋಜನೆ ಪೂರಕವಾಗಿದೆ. ಭೂಗರ್ಭ ಜಲ ಹೆಚ್ಚಳ, ಮೌಲ್ಯಯುತ ಉತ್ಪನ್ನಗಳ ತಯಾರಿಕೆಗೆ ಬಿದಿರು ಉದ್ದಿಮೆ ಸಕಾರಾತ್ಮಕವಾಗಿದೆ.