ಮುಂಬೈ: ವಿಮಾನಯಾನ ಮುಖ್ಯಸ್ಥರ ಪೂರ್ವ ಲಿಖಿತ ಬರವಣಿಗೆಯ ದೃಢೀಕರಣವಿಲ್ಲದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಏರ್ ಇಂಡಿಯಾ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದೆ.
ಕಳೆದ ಏಪ್ರಿಲ್ 30ರಂದು ಈ ಸಂಬಂಧ ಸಿಬ್ಬಂದಿಗಳಿಗೆ ಸೂಚನೆ ನೀಡಿರುವ ಸಂಸ್ಥೆ ಏರ್ ಇಂಡಿಯಾ ವಿಮಾನದ ಯೂನಿಫಾರ್ಮ್ ಧರಿಸಿ ಸಿಬ್ಬಂದಿಗಳು ವಿಡಿಯೊ ಪೋಸ್ಟ್ ಮಾಡಿದ ಅಥವಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉದಾಹರಣೆಗಳಿವೆ. ಇಂತಹ ವಿಡಿಯೊ, ಫೋಟೋ ಮತ್ತು ಸುದ್ದಿಗಳು ಮುದ್ರಣ, ಎಲೆಕ್ಟ್ರಾನಿಕ್, ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಿ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದೆ.
ಕಂಪೆನಿಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿಯಿಲ್ಲದೆ ಯಾವುದೇ ಸಿಬ್ಬಂದಿ ವೈಯಕ್ತಿಕವಾಗಿ ಅಥವಾ ಗುಂಪಿನ ಅಥವಾ ಸಂಸ್ಥೆಯ ಒಕ್ಕೂಟದ ಪರವಾಗಿ ನೀಡುವಂತಿಲ್ಲ ಎಂದು ಹೇಳಿಕೆಯಲ್ಲಿ ಸೂಚನೆ ನೀಡಿದೆ.
ಏರ್ ಇಂಡಿಯಾ ಸಂಸ್ಥೆಯ ನೌಕರರು ಸೂಕ್ತ ಸಂಪರ್ಕದ ಮೂಲಕ ಮನವಿ ಮಾಡಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸ್ಪಷ್ಟ ಅನುಮತಿ ಪಡೆದ ಬಳಿಕವಷ್ಟೇ ಮಾಧ್ಯಮಗಳಿಗೆ ಹೇಳಿಕೆ ನೀಡಬಹುದು ಎಂದು ಬರೆದ ಸುತ್ತೋಲೆಗೆ ಸಿಬ್ಬಂದಿ ಇಲಾಖೆಯ ನಿರ್ದೇಶಕ ಅಮ್ರಿತಾ ಶರಣ್ ಸಹಿ ಹಾಕಿದ್ದಾರೆ.
ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕಂಪೆನಿಯ ನಿಯಮಗಳಿಗನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಏರ್ ಇಂಡಿಯಾ ಯೂನಿಯನ್ ನ ಕೆಲವು ಪ್ರತಿನಿಧಿಗಳು ಇತ್ತೀಚೆಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಇದರಿಂದ ಕಂಪೆನಿ ಈ ತೀರ್ಮಾನ ಕೈಗೊಂಡಿದೆ.
ಕಳೆದ ವರ್ಷ ಏರ್ ಇಂಡಿಯಾದ ಷೇರುಗಳನ್ನು ಮಾರಾಟ ಮಾಡಲು ಸರ್ಕಾರ ಯತ್ನಿಸಿತ್ತು. ಆದರೆ ಸೂಕ್ತ ಖರೀದಿದಾರರು ಸಿಗದೆ ಅದು ಯಶಸ್ವಿಯಾಗಿರಲಿಲ್ಲ.