ಬದಿಯಡ್ಕ: ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ನಿರಂತರ ಆಹಾರ ವ್ಯವಸ್ಥೆಯನ್ನು ಪೂರೈಸುವ ಯೋಜನೆಯ ಅಂಗವಾಗಿ ಜೂನ್ 8 ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಆಯೋಜಿಸಲಾಗಿರುವ ಹಲಸುಮೇಳ ಸಮಾರಂಭದ ಅಂಗವಾಗಿ ವಲಯ ಸಂಪರ್ಕ ಅಭಿಯಾನ ಕಾರ್ಯಕ್ರಮವು ಚಂದ್ರಗಿರಿ ವಲಯದಲ್ಲಿ ಮುಳ್ಳೇರಿಯಾ ಮಂಡಲ ಕಾರ್ಯಾಲಯದಲ್ಲಿ ಗುರುವಾರ ಜರಗಿತು.
ವಲಯಾಧ್ಯಕ್ಷ ಬಾಲಕೃಷ್ಣ ಭಟ್ ಅಮ್ಮಂಗಲ್ಲು ಅಧ್ಯಕ್ಷತೆ ವಹಿಸಿದ್ದರು. ಡಾ.ವೈ.ವಿ. ಕೃಷ್ಣಮೂರ್ತಿ ಇವರು ಹಲಸುಮೇಳ ಕಾರ್ಯಕ್ರಮದ ಉದ್ದೇಶ, ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತು ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಗೋವಿಗೆ ನಿರಂತರ ಆಹಾರ ವ್ಯವಸ್ಥೆಯನ್ನು ಮಾಡುವ ಬಗ್ಗೆ ವಿವರಣೆಗಳನ್ನಿತ್ತರು.
ಶಿವಪ್ರಸಾದ ವರ್ಮುಡಿ ಈ ಸಂದರ್ಭ ಮಾತನಾಡಿ, ಹಲಸು ಮೇಳ ಸಮಾರಂಭವನ್ನು ಯಶಸ್ವಿಗೊಳಿಸಲು ಬೇಕಾದ ಪೂರ್ವ ಸಿದ್ಧತೆಗಳ ಬಗ್ಗೆ ಮಾಹಿತಿಗಳನ್ನಿತ್ತರು ಮತ್ತು ಪ್ರಕೃತಿದತ್ತವಾಗಿ ಧಾರಾಳವಾಗಿ ಲಭ್ಯವಿರುವ ಶ್ರೇಷ್ಠ ಫಲವಾಗಿರುವ ಹಲಸನ್ನು ಸದುಪಯೋಗಮಾಡಿಕೊಳ್ಳುವ ವಿಧಾನವೂ ಗೋಸಾಕಣೆಗೆ ಅನಿವಾರ್ಯವೂ ಆಗಿರುವ ಹಲಸುಮೇಳ ಸಮಾರಂಭ ಸಮಕಾಲೀನ ಕಾರ್ಯಕ್ರಮ. ಚಂದ್ರಗಿರಿ ವಲಯವು ಈಗಾಗಲೇ ಹಪ್ಪಳತಯಾರಿಯಲ್ಲಿ ಉತ್ಸಾಹದಿಂದ ಸಿದ್ಧರಾಗಿ ಮಾದರಿಯಾಗಿ ಕಾರ್ಯನಿರತರಾಗಿರುತ್ತಾರೆ. ಸರ್ವ ವಲಯದವರೂ ಈ ರೀತಿಯಲ್ಲಿ ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಬೇಕು ಎಂದು ತಿಳಿಸಿದರು.
ಗೀತಾಲಕ್ಷ್ಮಿ, ಸೌಮ್ಯ ಕುಳೂರು, ಜಿ ಕೆ ಕೂಳೂರು, ಗೋವಿಂದ ಬಳ್ಳಮೂಲೆ ಸಮಾರಂಭದ ಯಶಸ್ವಿಯ ಬಗ್ಗೆ ಸೂಕ್ತ ಸಲಹೆಗಳನ್ನಿತ್ತರು.
ಕುಸುಮಾ ಪೆರ್ಮುಖ ಹಲಸು ಮೇಳಕ್ಕಾಗಿ ಮಾಡುವ ಉತ್ಪನ್ನಗಳನ್ನು ಯಾವ ರೀತಿಯಲ್ಲಿ ಸಿದ್ಧಗೊಳಿಸಬೇಕೆಂಬುದರ ಕುರಿತು ಸೂಕ್ತ ಮಾಹಿತಿಗಳನ್ನಿತ್ತರು.