ಕಾಸರಗೋಡು: ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ನಿರಂತರ ಆಹಾರ ವ್ಯವಸ್ಥೆಯನ್ನು ಪೂರೈಸುವ ಯೋಜನೆಯ ಅಂಗವಾಗಿ ಜೂನ್ 8 ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಲಿರುವ ಹಲಸುಮೇಳ ಸಮಾರಂಭದ ಅಂಗವಾಗಿ ವಲಯ ಸಂಪರ್ಕ ಅಭಿಯಾನ ಕಾರ್ಯಕ್ರಮವು ಕಾಸರಗೋಡು ವಲಯದ ಗುರಿಕ್ಕಾರ ತೆಕ್ಕೇಕರೆ ಶಂಕರನಾರಾಯಣ ಭಟ್ ಅವರ ನಿವಾಸದಲ್ಲಿ ಇತ್ತೀಚೆಗೆ ಜರಗಿತು.
ಸಭೆಯಲ್ಲಿ ರಾಸ್ತಾವಿಕವಾಗಿ ಮಾತನಾಡಿದ ಶಿವಪ್ರಸಾದ ವರ್ಮುಡಿ ಮಾತನಾಡಿ, ಹಲಸು ಪುರಾತನ ಕಾಲದಿಂದಲೇ ವಿವಿಧೋಪಯೋಗೀ ಸಸ್ಯವಾಗಿದ್ದು ಇದರಿಂದ ವೈವಿಧ್ಯಮಯ ಶ್ರೇಷ್ಠ ಆಹಾರ ವಸ್ತುಗಳನ್ನು ತಯಾರಿಸಿ ಮಾನವನಿಗೂ ಗೋವುಗಳಿಗೂ ಬಳಸುವ ಪದ್ಧತಿ ಸಿದ್ಧಹಸ್ತವಾಗಿತ್ತು. ಈ ಪಾರಂಪರಿಕ ಜ್ಞಾನವನ್ನು ಮುಂದಿನ ತಲೆಮಾರಿಗೆ ಹಸ್ತಾ0ತರಿಸುವ ಶ್ರೇಷ್ಠ ಕಾರ್ಯವೂ ಈ ಸಮಾರಂಭದಿಂದ ಪ್ರಾಪ್ತಿಯಾಗುತ್ತದೆ. ಈ ಮೂಲಕ ಪುಣ್ಯಕೋಟಿಯ ಸೇವೆ ಮಾಡೋಣ ಎಂದು ತಿಳಿಸಿದರು.
ಮಹಾಮಂಡಲ ಕಾಮದುಘಾ ವಿಭಾಗದ ಡಾ. ವೈ.ವಿ ಕೃಷ್ಣಮೂರ್ತಿಯವರು ಹಲಸು ಮೇಳ ಮತ್ತು ಹಲಸು ಬೆಳೆಸಿ ಗೋವುಉಳಿಸಿ ಎಂಬ ವಿಚಾರವಾಗಿ ಸಮಗ್ರ ಮಾಹಿತಿಗಳನ್ನಿತ್ತರು. ಮಂಡಲ ಮಾತೃ ವಿಭಾಗದ ಕುಸುಮಾ ಪೆರ್ಮುಖ ಅವರು ಘಟಕಗಳ ಮತ್ತು ವಲಯಗಳ ನೇತೃತ್ವದಲ್ಲಿ ಹಪ್ಪಳ ತಯಾರಿ ಮಾಡುವ ಕುರಿತು ಮಾಡಬೇಕಾದ ವಿವಿಧ ಸಿದ್ಧತೆಗಳ ಬಗ್ಗೆ ಮಾಹಿತಿಗಳನ್ನಿತ್ತರು.
ಚಂದ್ರಗಿರಿ ವಲಯದಲ್ಲಿ ಯಶಸ್ವಿಯಾಗಿ ಹಪ್ಪಳ ತಯಾರೀ ಮಾಡಿದ ಕಾರ್ಯಾಗಾರದ ಬಗ್ಗೆ ಶ್ರೀಮತಿ ಗೀತಾಲಕ್ಷ್ಮಿ ಮುಳ್ಳೇರಿಯಾ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಲಯ ಕಾರ್ಯದರ್ಶಿ ಈಶ್ವರ ಭಟ್ ಉಳುವಾನ, ಗುರಿಕ್ಕಾರ ಶಿರಂತಡ್ಕ ಗೋಪಾಲಕೃಷ್ಣ ಭಟ್ , ಮುಳ್ಳೇರಿಯಾ ಮಂಡಲಾಧ್ಯಕ್ಷ ಪ್ರೊ ಶ್ರೀಕೃಷ್ಣ ಭಟ್, ಶ್ರೀಕಾರ್ಯಕರ್ತೆ ಪರಮೇಶ್ವರಿ ಕೂಡ್ಲು, ಹರಿಯಪ್ಪ ಭಟ್ ಇವರು ಉಪಸ್ಥಿತರಿದ್ದರು. ವಲಯಾಧ್ಯಕ್ಷ ರಮೇಶ ಭಟ್ ವೈ ವಿ ಸ್ವಾಗತಿಸಿ, ವಲಯ ಸೇವಾ ಪ್ರಧಾನ ಮಹೇಶ್ ಮನ್ನಿಪ್ಪಾಡಿ ವಂದಿಸಿದರು.