ಕಾಸರಗೋಡು: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾಸರಗೋಡು ನಗರದಲ್ಲಿ ಕಾರ್ಮಿಕರಿಂದ ಬುಧವಾರ ಸಾಮೂಹಿಕ ಓಟ ನಡೆಯಿತು.
ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಿಂದ ಆರಂಭಿಸಿದ ಸಾಮೂಹಿಕ ಕಾರ್ಮಿಕರ ಓಟ ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಸಂಪನ್ನಗೊಂಡಿತು. ಸಾಮೂಹಿಕ ಓಟ ಕಾರ್ಯಕ್ರಮವನ್ನು ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್, ಜಿಲ್ಲಾ ಲೇಬರ್ ಆಫೀಸ್, ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಪಿ.ಹಬೀಮ್ ರಹಿಮಾನ್ ಸಾಮೂಹಿಕ ಓಟ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಜಿಲ್ಲೆಯ ವಿವಿಧ ಪ್ರದೇಶಗಳಿಂದ ನೂರಾರು ಮಂದಿ ಕಾರ್ಮಿಕರು ಸಾಮೂಹಿಕ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದರು. ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಬಹುಮಾನಗಳನ್ನು ವಿತರಿಸಿದರು. ಪುರುಷರ ವಿಭಾಗದಲ್ಲಿ ಎಂ.ರಾಜೇಶ್ ಪ್ರಥಮ ಸ್ಥಾನವನ್ನೂ, ಕೆ.ಅನುರಾಜ್ ದ್ವಿತೀಯ ಸ್ಥಾನವನ್ನೂ, ಎಂ.ವಿ.ಕೃಷ್ಣನ್ ತೃತೀಯ ಸ್ಥಾನವನ್ನು ಪಡೆದರು. ಮಹಿಳೆಯರ ವಿಭಾಗದಲ್ಲಿ ವಸಂತ ಕುಮಾರಿ ಪ್ರಥಮ ಸ್ಥಾನವನ್ನೂ, ಪದ್ಮಿನಿ ದ್ವಿತೀಯ ಸ್ಥಾನವನ್ನೂ, ಸರಸ್ವತಿ ತೃತೀಯ ಸ್ಥಾನವನ್ನು ಪಡೆದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಸರಕಾರಿ ಪ್ಲೀಡರ್ ಪಿ.ವಿ.ಜಯರಾಜನ್, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಪಿ.ಹಬೀಬ್ ರಹಿಮಾನ್, ಕೌನ್ಸಿಲ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ರಾಘವನ್, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಭಾಗವಹಿಸಿದರು.