ಬದಿಯಡ್ಕ: ಹೃದಯದ ಭಾವ ಪ್ರವೇಶಿಸುವ, ನೇರ ಹೃದಯವನ್ನು ತಟ್ಟುವ ಕಾವ್ಯದ ಮಾರ್ಗ ಕಾಲಕಾಲಕ್ಕೆ ಬದಲಾಗಿದೆ. ನವ್ಯ ಪಂಥದ ಬಳಿಕ ನವ್ಯೋತ್ತರ ಎಂಬ ಕಾವ್ಯ ಪ್ರಕಾರ ಬಂದಿದ್ದರೂ ಅದಕ್ಕೆ ದೊಡ್ಡ ಶಕ್ತಿ ಕೂಡಿ ಬರಲಿಲ್ಲ. ಈಗ ಹೊಸ ತಲೆಮಾರಿನ ಕವಿಗಳು ಅಲ್ಲಲ್ಲಿ ಶಕ್ತಿಯುತವಾಗಿ ಕಾವ್ಯ ರಚನೆ ಮಾಡುತ್ತಿದ್ದರೂ ಅವರೆಲ್ಲ ದ್ವೀಪಗಳಂತೆ ಬೇರೆ ಬೇರೆಯಾಗಿ ಬರೆಯುತ್ತಿರುವುದರಿಂದ ಅದಕ್ಕೆ ಶಕ್ತಿ ಕೂಡಿ ಬರುತ್ತಿಲ್ಲ. ಸಂವಾದ, ಚರ್ಚೆಗಳಿಂದ ಕಾವ್ಯ ಬೆಳೆಯಬೇಕಾಗುತ್ತದೆ. ಅದಕ್ಕೆ ಕಮ್ಮಟಗಳು ತೀರ ಅಗತ್ಯ. ಆಗ ವಾಟ್ಸ್ ಆಪ್, ಫೇಸ್ ಬುಕ್ ಗಳಲ್ಲಿ ಬರೆಯುತ್ತಿರುವ ಯುವ ಕವಿಗಳಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತದೆ ಎಂದು ಹಿರಿಯ ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ನೀರ್ಚಾಲು ಸಮೀಪದ ಕೊಲ್ಲಂಗಾನದ ಅನಂತಶ್ರೀಯ 2ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ, ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಮತ್ತು ಅನಂತಶ್ರೀ ಟ್ರಸ್ಟ್ ಕೊಲ್ಲಂಗಾನದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಚಂದ್ರೋದಯದಿಂದ ಭಾನುವಾರ ಸೂರ್ಯೋದಯದ ವರೆಗೆ ವಿಶಿಷ್ಟವಾಗಿ ಆಯೋಜಿಸಲಾದ "ಗಡಿನಾಡ ಬೆಳದಿಂಗಳ ಬೆಳಕು" ಕಾರ್ಯಕ್ರಮದ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಮ್ಮಟಗಳಲ್ಲಿ ಕವಿಗಳಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತದೆ. ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಕವಿಗಳ ಸಾಹಿತಿಗಳ ಸಂಘಟನೆ ನಿರ್ಮಾಣವಾಗಿ ಸಾಹಿತ್ಯ ರಚನೆಗೆ ಬಲ ಬರುತ್ತದೆ ಎಂದ ಅವರು ಹೊಸ ಕವಿ ಕಾವ್ಯಗಳು ಬೇಸಿಗೆಯ ಮಳೆಯಂತೆ ಇಂಗದಿರಲಿ ಎಂದು ಕಿವಿಮಾತು ಹೇಳಿದರು.
ಕವಿ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ಪೂರ್ತಿ ಕವಿಗೋಷ್ಠಿಯ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಭರವಸೆಗಳ ಗೋಪುರಗಳಂತೆ ಬೆಳೆದುಬರುತ್ತಿರುವ ನವ್ಯೋತ್ತರದ ಇಂದಿನ ಸಾಹಿತ್ಯ ವಲಯ ಸಹೃದಯ ಓದುಗ ಮತ್ತು ಕೇಳುಗನ ಮನಸ್ಸನ್ನು ಗೆಲ್ಲುವಲ್ಲಿ ಸೋಲುವ ಭೀತಿ ಎದುರಿಸುತ್ತಿದೆ. ಆದರೆ ಗುಣಾತ್ಮ ಬರಹಗಳಿಗೆ ಕೇಳುವ ಕಿವಿ, ನೋಡುವ ಕಣ್ಣುಗಳು ಸಾಕಷ್ಟಿದ್ದು, ಕೈಜೋಡಿಸಿ ಒಂದುಗೂಡಿಸುವ ಮುಂದಾಳತ್ವ ಬೇಕು ಎಂದು ತಿಳಿಸಿದರು. ವರ್ತಮಾನದ ಬೇಗುದಿ, ತಿವಿಯುವ ಒಳತೋಟಿ, ಗಡಿಬಿಡಿಯ ಸದ್ಯದ ವಾತಾವರಣದಲ್ಲಿ ಗಡಿನಾಡಿನ ಸಾಹಿತ್ಯದ ಘಮಲು ಮುನ್ನೆಲೆಯಲ್ಲಿ ಅಂತರ್ಗಾಮಿಯಾಗಿ ಪ್ರವಹಿಸುತ್ತಿರುವುದರ ಅನುಭವ ಭಾಷೆ, ಸಂಸ್ಕøತಿ ಪ್ರೇಮಿಗಳಿಗೆ ಲವಲವಿಕೆಗೆ ಕಾರಣವಾಗಿದೆ ಎಂದು ತಿಳಿಸಿದರು.
ಕವಿಗಳಾದ ಡಾ.ಸುರೇಶ್ ನೆಗಳಗುಳಿ, ಕೆ. ಶೈಲಾಕುಮಾರಿ, ಸತ್ಯವತಿ ಕೊಳಚಪ್ಪು, ವೆಂಕಟ ಭಟ್ ಎಡನೀರು, ಬಾಲ ಮಧುರಕಾನನ, ಸಂಧ್ಯಾಗೀತಾ ಬಾಯಾರು, ಗಣೇಶ್ ಪೈ ಬದಿಯಡ್ಕ, ಗುಣಾಜೆ ರಾಮಚಂದ್ರ ಭಟ್, ಪ್ರಸನ್ನಕುಮಾರಿ, ವಿದ್ಯಾಗಣೇಶ್ ಅಣಂಗೂರು, ಗಣಪತಿ ಭಟ್ ಮಧುರಕಾನನ, ರವೀಂದ್ರನ್ ಪಾಡಿ, ನರಸಿಂಹ ಭಟ್ ಏತಡ್ಕ, ಪರಿಣಿತ ರವಿ ಎಡನಾಡು, ಚೇತನಾ ಕುಂಬಳೆ, ಬಾಲ ಮಧುರಕಾನನ, ಪ್ರಭಾಕರ ಕಲ್ಲೂರಾಯ, ಶ್ವೇತಾ ಕಜೆ, ಶಾಂತಾ ರವಿ ಕುಂಟಿನಿ, ಜಯಾನಂದ ಪೆರಾಜೆ, ಶಾಂತಾ ಪುತ್ತೂರು, ಹಿದಾಯತ್ ಕಂಡಲೂರಿ ಕುಂದಾಪುರ, ಅಶ್ವಾಕ್ ಉಪ್ಪಳ, ಮೊಹಮ್ಮದ್ ಅಝೀಂ ಮಣಿಮುಂಡ, ಕೆ.ವಿ.ಕುಮಾರನ್, ಪ್ರೇಮಚಂದ್ರನ್ ಚೋಂಬಾಲ, ಗೋಪಾಲಕೃಷ್ಣ ಭಟ್ ಕಟ್ಟತ್ತಿಲ, ಸುಭಾಶ್ ಪೆರ್ಲ, ರಿತೇಶ್ ಕಿರಣ್ ಕಾಟುಕುಕ್ಕೆ, ಗಣರಾಜ ನಿಡುಗಳ, ಜ್ಯೋಸ್ಯ್ನಾ ಎಂ.ಕಡಂದೇಲು, ಅನಂತಗಣಪತಿ ಭಟ್, ಪ್ರಭಾವತಿ ಕೆದಿಲಾಯ ಪುಂಡೂರು, ಜಯಾನಂದ ಪೆರಾಜೆ,ಸ್ಟೇನಿ ಲೋಬೋ ಕಲ್ಲಕಟ್ಟ ಮೊದಲಾದವರ ಸಹಿತ 54 ಕ್ಕಿಂತಲೂ ಮಿಕ್ಕಿದ ಕವಿಗಳು ವಿವಿಧ ಭಾಷೆಗಳ ಕವಿತೆಗಳನ್ನು ಮಂಡಿಸಿದರು.
ಕಾರ್ಯಕ್ರಮದ ಅಂಗವಾಗಿ ಬಾಲ ಪ್ರತಿಭೆ ಉಪಾಸನಾ ಪಂಜರಿಕೆ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ, ಸತ್ಯಾತ್ಮ ಕುಂಟಿನಿ ಅವರಿಂದ ವಿವಿಧ ಹಾಡುಗಳ ಗಾಯನ, ಸತ್ಯಕಾಮ ಕುಂಟಿನಿ ಅವರಿಂದ ಸಿನಿಮ್ಯಾಟಿಕ್ ನೃತ್ಯ, ಸೌರಭ ಕುಂಟಿನಿ ಅವರಿಂದ ಭರತನಾಟ್ಯ ಪ್ರದರ್ಶನ, ಪ್ರಭಾವತಿ ಕೆದಿಲಾಯ ಅವರಿಂದ ಕಥಾ ಸಂಕೀರ್ತನೆ ಮೊದಲಾದ ವೈವಿಧ್ಯಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಸಂಯೋಜಕ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ಶ್ರೀನಾಥ್ ಸ್ವಾಗತಿಸಿ, ವಂದಿಸಿದರು. ಪುರುಷೋತ್ತಮ ಭಟ್.ಕೆ. ಕಾರ್ಯಕ್ರಮ ನಿರೂಪಿಸಿದರು.