ಮಂಜೇಶ್ವರ: ಇತಿಹಾಸ ಪ್ರಸಿದ್ದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೆಗೆ ಗುರುವಾರ ರಾತ್ರಿ ಚಾಲನೆ ನೀಡಲಾಯಿತು.
ಶುಕ್ರವಾರ ತಾಳಮದ್ದಳೆ, ಭಕ್ತಿ ರಸ ಮಂಜರಿ, ರಾತ್ರಿ 1 ರಿಂದ ಕೊಟ್ಯದಾಯನ ನೇಮ, ಕಟ್ಟೆ ಪೂಜೆ, ಕೆರೆ ದೀಪೋತ್ಸವ ಹಾಗೂ ಶನಿವಾರ ಕಂಚಿಲ ಸೇವೆ, ದೀಪೋತ್ಸವ, ತಮ್ಮ ದೈವದ ನೇಮ, ಮಡಸ್ನಾನ, ಮುಂಡತ್ತಾಯ ದೈವದ ನೇಮ, ರಾತ್ರಿ ನಡುಬಂಡಿ ಉತ್ಸವ, ಅಣ್ಣ ದೈವದ ನೇಮ ನಡೆಯಿತು.
ಧ್ವಜಾರೋಹಣಕ್ಕೆ ಕ್ಷೇತ್ರದ ಮೊಕ್ತೇಸರರಾದ ದಯಾಕರ ಮಾಡ, ಮೋಹನ್ ಶೆಟ್ಟಿ, ಮಾಧವ ಸಾಲಿಯಾನ್, ಮಾಧವ ಕೆ ಸಹಿತ ಉತ್ಸವ ಸಮಿತಿ ಪದಾಧಿಕಾರಿಗಳು ಹತ್ತು ಗ್ರಾಮಸ್ಥರು ಸಹಿತ ಹಲವಾರು ಮಂದಿ ಮುಂದಾಳತ್ವವನ್ನು ನೀಡಿದರು.
ಹಿಂದೂ ಮುಸ್ಲಿಂ ಸಾಮರಸ್ಯತೆಯನ್ನು ಸಾರುವ ಕ್ಷೇತ್ರದ ಉತ್ಸವದಲ್ಲಿ ಧ್ವಜಾರೋಹಣದಂದು ರಾತ್ರಿ ಸಾಮರಸ್ಯತೆಗೆ ಧಕ್ಕೆಯನ್ನುಂಟುಮಾಡುವ ಉದ್ದೇಶವಿರಿಸಿ ಅಪರಿಚಿತ ಕಿಡಿಗೇಡಿಗಳು ತೋರಣಕ್ಕೆ ಹಾನಿಯನ್ನುಟ್ಟುಂಟುಮಾಡಿರುವುದಾಗಿಯೂ ಅಕ್ರಮ ಎಸೆಗಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿರುವುದಾಗಿಯೂ ಕ್ಷೇತ್ರ ಮೊಕ್ತೇಸರ ದಯಾಕರ ಮಾಡ ತಿಳಿಸಿದ್ದಾರೆ.
ದೈವಸ್ವಂ ಅಧ್ಯಕ್ಷರ ಭೇಟಿ:
ಉದ್ಯಾವರ ಜಾತ್ರೆಯ ಅಂಗವಾಗಿ ಶನಿವಾರ ರಾಜ್ಯ ದೈವಸ್ವಂ ಬೋರ್ಡ್ ಅಧ್ಯಕ್ಷ ಓ.ಕೆ.ವಾಸು ಅವರು ವಿಶೇಷ ಭೇಟಿ ನೀಡಿ ದೈವಗಳಲ್ಲಿ ಪ್ರಾರ್ಥಿಸಿ ವ್ಯವಸ್ಥೆಗಳ ಅವಲೋಕನ ನಡೆಸಿದರು.
ಇಂದಿನ ಕಾರ್ಯಕ್ರಮ: ಬೆಳಿಗ್ಗೆ 11ಕ್ಕೆ ತಮ್ಮ ದೈವದ ನೇಮ, ಸಂಜೆ 4ಕ್ಕೆ ಮುಂಡತ್ತಾಯ ದೈವದ ನೇಮ, ರಾತ್ರಿ ಕಡೆಬಂಡಿ ಉತ್ಸವ, ತಮ್ಮ ದೈವದ ನೇಮ, ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಈ ತಿಂಗಳ 15 ರ ತನಕ ಜಾತ್ರೋತ್ಸವ ನಡೆಯಲಿದೆ.