ಮಧೂರು: ಯಕ್ಷಗಾನವು ಸರ್ವಾಂಗ ಸುಂದರ ಕಲೆ. ಯಕ್ಷಗಾನದ ತರಗತಿಗಳಲ್ಲಿ ಭಾಗಿಕ ತರಬೇತಿ ಮಾತ್ರ ಲಭಿಸುತ್ತದೆ. ಆದರೆ ಶಿಬಿರಗಳನ್ನು ನಡೆಸುವ ಮೂಲಕ ಸರ್ವಾಂಗಗಳ ಕಲಿಕೆ ಸಾಧ್ಯವಾಗುತ್ತದೆ ಎಂದು ಕಾಸರಗೋಡು ಅಂಚೆ ಅಧೀಕ್ಷಕ ಕಚೇರಿಯ ಸಹಾಯಕ ಬಿ.ವಾಸುದೇವ ನಾವಡ ಮಧೂರು ಅಭಿಪ್ರಾಯಪಟ್ಟರು.
ಅವರು ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಆಶ್ರಯದಲ್ಲಿ ಆರಂಭವಾದ ಯಕ್ಷಗಾನ ತರಬೇತಿ ಶಿಬಿರವನ್ನು ಕುತ್ಯಾಳ ಶ್ರೀ ಕ್ಷೇತ್ರದಭಿತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಕಲೆಗೆ ಸಹಜವೆನಿಸಿದ ಏರು ಶ್ರುತಿಯು ಎಲ್ಲಾ ವರ್ಗದ ಕಲಾಭಿಮಾನಿಗಳಿಗೆ ಪಥ್ಯವಾಗುವುದಿಲ್ಲ. ಆದರೆ ಈ ಕಲೆಯ ಒಳಹೊಕ್ಕು ಆಸ್ವಾದಿಸುವ ಸಹೃದಯ ಇದರ ಸವಿಯನ್ನು ಅನುಭವಿಸುತ್ತಾನೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ಮೊಕ್ತೇಸರ ಕೆ.ಜಿ.ಶ್ಯಾನುಭಾಗ್ ವಹಿಸಿದ್ದರು. ಶಿಬಿರವನ್ನು ನಡೆಸಿಕೊಡುವ ನಾಟ್ಯಗುರು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಬ್ಬಣ್ಣಕೋಡಿ ರಾಮ ಭಟ್ ಉಪಸ್ಥಿತರಿದ್ದರು.
ಸುರೇಂದ್ರ ಕೂಡ್ಲು ಪ್ರಾರ್ಥಿಸಿದರು. ಗೋಪಾಲಕೃಷ್ಣ ಬಲ್ಯಾಯ ಸ್ವಾಗತಿಸಿ, ಅಚ್ಯುತ ಬಲ್ಯಾಯ ಕೂಡ್ಲು ವಂದಿಸಿದರು. ಕಿಶೋರ್ ಕುಮಾರ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.