ಉಪ್ಪಳ: ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಶಿಕ್ಷಕರಿಗಾಗಿ ಹಮ್ಮಿಕೊಂಡ ಎರಡು ದಿನಗಳ ಪುನರ್ಮನನ ಶಿಬಿರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಶಿಬಿರವನ್ನು ಶ್ರೀ ಸತ್ಯಸಾಯಿ ಸೇವಾಸಂಸ್ಥೆಗಳ ಜಿಲ್ಲಾಧ್ಯಕ್ಷ ಶಿವರಾಮ ಕಜೆ ಅವರು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಶಿಲ್ಪಿ ಕಲ್ಲುಗಳನ್ನು ಕೆತ್ತಿ ಸುಂದರ ಮೂರ್ತಿಯನ್ನು ರಚಿಸುವಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಉತ್ತಮ ಜ್ಞಾನವಂತರನ್ನಾಗಿಸುತ್ತಾರೆ. ಅಂತಹ ಶಿಕ್ಷಕರು ಉತ್ತಮ ಗುಣಗಳನ್ನು ಬೆಳೆಸಿಕೊಂಡು ಹರಿಯುವ ನೀರಿನಂತೆ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡಾಗ ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡಲು ಸಾಧ್ಯ. ಜೊತೆಗೆ ಸತ್ಯಸಾಯಿ ಬಾಬಾರವರ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಭಗವಂತನ ಅನುಗ್ರಹ ಗಳಿಸಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿ ವಿದ್ಯೆಗಿಂತ ಮಿಗಿಲಾದ ಧನವಿಲ್ಲ, ಸಮಾಜವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದರು.
ವೇದಿಕೆಯಲ್ಲಿ ಪ್ರಶಾಂತಿ ಸೇವಾ ಟ್ರಸ್ಟಿನ ಉಪಾಧ್ಯಕ್ಷ ಪೆಲತ್ತಡ್ಕ ರಾಮಕೃಷ್ಣ ಭಟ್, ಟ್ರಸ್ಟಿನ ಸದಸ್ಯ ಪಿ. ಸದಾಶಿವ ಭಟ್, ಸಮಿತಿಯ ಸಂಚಾಲಕ ಕಟ್ಟದಮನೆ ಗೋಪಾಲಕೃಷ್ಣ ಭಟ್, ಸಂಪನ್ಮೂಲ ವ್ಯಕ್ತಿಯಾಗಿ ಕೊಲಾರ ಮಹೇಶ್ ಪಿ.ಯು. ಕಾಲೇಜು ಪ್ರಾಂಶುಪಾಲ ರಾಜ್ ಕುಮಾರ್ ಮತ್ತು ಪ್ರಾಂಶುಪಾಲ ಅನೂಪ್ ಕೆ. ಉಪಸ್ಥಿತರಿದ್ದರು. ಆಡಳಿತ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್ ಸ್ವಾಗತಿಸಿ, ಟ್ರಸ್ಟಿನ ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್ ವಂದಿಸಿದರು. ಶಿಕ್ಷಕ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.